
ಲಕ್ಷ್ಮೀನಗರ: ಬೆಳ್ಳಳೆ ಬೊಬ್ಬರ್ಯ ಕ್ಷೇತ್ರದ ಪುನರ್‌ನಿರ್ಮಾಣ ಕಾರ್ಯ ಪೂರ್ಣಕ್ಕೆ ಬರುವ ಹಂತದಲ್ಲಿದ್ದು, ಏಪ್ರಿಲ್ 3 ರಿಂದ 6ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿವೆ.
ಉಡುಪಿ ಜಿಲ್ಲೆ ತೆಂಕನಿಡಿಯೂರು ಗ್ರಾಮದ ಬೆಳ್ಳಳೆ ಬೊಬ್ಬರ್ಯ ದೈವಸ್ಥಾನ, ಸ್ಥಳೀಯ ಭಕ್ತರು ಹಾಗೂ ಸುತ್ತಮುತ್ತಲಿನ ಜನರಿಂದ ಪೂಜಿಸಲ್ಪಡುವ ಪ್ರಮುಖ ದೈವಸ್ಥಾನಗಳಲ್ಲಿ ಒಂದಾಗಿದೆ. ಈ ಕ್ಷೇತ್ರವು ತುಳುನಾಡಿನ ಅನೇಕ ದೈವಸ್ಥಾನಗಳ ಪೈಕಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.
ಬೊಬ್ಬರ್ಯನ ಆರಾಧನೆ ಮತ್ತು ವಿಶೇಷತೆ
ವಾಸ್ತು ತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ಪ್ರಕಾರ, ಈ ಕ್ಷೇತ್ರದಲ್ಲಿ ಬೊಬ್ಬರ್ಯನಿಗೆ ಮರದ ವಿಗ್ರಹದ ರೂಪದಲ್ಲಿ ಪೂಜೆ ನಡೆಯುತ್ತದೆ. ತಲಪಾಡಿಯಲ್ಲಿ ದೈವವನ್ನು ಪ್ರತ್ಯೇಕವಾಗಿ ಆರಾಧಿಸುವ ವ್ಯವಸ್ಥೆಯೂ ಇಲ್ಲಿ ಅಳವಡಿಸಲಾಗಿದೆ. ಮೂರ್ತಿರೂಪದಲ್ಲಿಯೂ ಹಾಗೆಯೇ ಮಾಡದ ಒಳಗೂ ಪೂಜೆಯ ಕಾರ್ಯ ನಡೆಯುವ ತುಳುನಾಡಿನ ಅಪರೂಪದ ಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಬೆಳ್ಳಳೆ ಮಹಾಲಿಂಗೇಶ್ವರ ದೈವಸ್ಥಾನದ ಪರಿವಾರ ದೇವರಾಗಿ, ಉತ್ತರಾಭಿಮುಖವಾಗಿ ಬೊಬ್ಬರ್ಯ ಮತ್ತು ಅವರ ಪರಿವಾರ ಶಕ್ತಿಗಳು ಇಲ್ಲಿ ನೆಲೆಸಿದ್ದಾರೆ.
ಜೀರ್ಣೋದ್ಧಾರ ಮತ್ತು ಶಿಲ್ಪಶೈಲಿ
ಈ ದೈವಸ್ಥಾನವು ಶಾಸ್ತ್ರೀಯ ಶೈಲಿಯಲ್ಲಿ ಪುನರ್‌ನಿರ್ಮಾಣಗೊಂಡಿದ್ದು, ಅದರ ಪ್ರಾಚೀನ ವೈಭವವನ್ನು ಕಾಪಾಡಿಕೊಂಡಿದೆ. ಗರ್ಭಗುಡಿಯು ಚತುಷ್ಕೋನಾಕಾರ ಶಿಲಾ ನಿರ್ಮಿತವಾಗಿದ್ದು, ಪುರಾತನ ಶೈಲಿಯ ಮುಖಮಂಟಪವನ್ನು ಕಂಬಗಳ ಸಹಿತ ನಿರ್ಮಿಸಲಾಗಿದೆ. ದೈವಸ್ಥಾನ ಶಿಖರವನ್ನು ಸುಂದರವಾಗಿ ರೂಪಗೊಳಿಸಲಾಗಿದೆ.
ಬೊಬ್ಬರ್ಯನ ಪೀಠ ಮತ್ತು ಪರಿವಾರದ ಸಾನಿಧ್ಯ
ಗರ್ಭಗುಡಿಯ ಎಡಭಾಗದಲ್ಲಿ ಬೊಬ್ಬರ್ಯನ ಮಾಡ, ಪ್ರಾಚೀನ ಶೈಲಿಯಲ್ಲಿಯೇ ನಿರ್ಮಾಣಗೊಂಡಿದೆ. ಕಲ್ಲಿನ ಸ್ಥಂಭಗಳೊಂದಿಗೆ ಮರದ ಮಾದರಿಯಲ್ಲಿ ಮಾಡವನ್ನು ರೂಪಿಸಿ, ಹಿತ್ತಾಳೆಯ ಆವರಣ ನೀಡಲಾಗಿದೆ. ಬಲಭಾಗದಲ್ಲಿ ಕಲ್ಕುಡ ದೈವದ ಸಾನಿಧ್ಯವಿದ್ದು, ಮುಂಭಾಗದಲ್ಲಿ ಕ್ಷೇತ್ರಪಾಲ ದೇವರ ಹಾಗೂ ಹಿಂದಿನ ಭಾಗದಲ್ಲಿ ಭಟಾರಿಯ ಸ್ಥಾನವಿದೆ. ಕ್ಷೇತ್ರದ ಪೂರ್ವ ಭಾಗದಲ್ಲಿ ನಾಗ ಮತ್ತು ರಕೇಶ್ವರಿಯ ಪ್ರತಿಷ್ಠೆ ಕೂಡಾ ನೆಲೆಯಾಗಿದೆ.
ಸ್ಥಳದ ವ್ಯವಸ್ಥೆಯ ಸುಧಾರಣೆ
ಪೂರ್ವದಲ್ಲಿ ಈ ಕ್ಷೇತ್ರದಲ್ಲಿ ಕೇವಲ ಪ್ರಾಕಾರವಿತ್ತು; ಇದೀಗ ಪೌಳಿ ನಿರ್ಮಾಣಗೊಂಡಿದ್ದು, ಮುಖ್ಯ ಪ್ರವೇಶ ದ್ವಾರವನ್ನು ಶಿಸ್ತಿನೊಂದಿಗೆ ನಿರ್ಮಿಸಲಾಗಿದೆ. ನೇಮೋತ್ಸವಕ್ಕಾಗಿ ಅಗತ್ಯವಾದ ಚಪ್ಪರ, ಭಕ್ತರು ಸಮಾರಂಭ ವೀಕ್ಷಿಸಲು ಶಿಲಾಸ್ಥಂಭಗಳೊಂದಿಗೆ ವಿಶಾಲ ವ್ಯವಸ್ಥೆ, ಮತ್ತು ಬೊಬ್ಬರ್ಯನ ಕೋಲ ನಡೆಯಲು ಸೂಕ್ತ ಮಣ್ಣಿನ ವೇದಿಕೆ ನಿರ್ಮಿಸಲಾಗಿದೆ.
ಈ ಜೀರ್ಣೋದ್ಧಾರದಿಂದ ಬೆಳ್ಳಳೆ ಬೊಬ್ಬರ್ಯ ಕ್ಷೇತ್ರವು ಮತ್ತಷ್ಟು ವೈಭವ ಪಡೆದು, ಭಕ್ತರ ಆರಾಧನೆಯನ್ನು ಮತ್ತಷ್ಟು ಹತ್ತಿರಗೊಳಿಸುವುದರಲ್ಲಿ ಯಶಸ್ವಿಯಾಗಿದೆ.








ವೇ। ಮೂಃ ಪುತ್ತೂರು ಶ್ರೀ ಶ್ರೀನಿವಾಸ ತಂತ್ರಿಗಳವರ ನೇತೃತ್ವದಲ್ಲಿ, ವಾಸ್ತು ತಜ್ಞರಾದ ವಿದ್ವಾನ್ ಗುಂಡಿಬೈಲು ಶ್ರೀ ಸುಬ್ರಹ್ಮಣ್ಯ ಭಟ್‌ರವರ ವಿನ್ಯಾಸದೊಂದಿಗೆ ನೆರವೇರಲಿರುವುದು. ಆ ಪ್ರಯುಕ್ತ ಭಗವದ್ಭಕ್ತರೆಲ್ಲರೂ ಬ್ರಹ್ಮ ಕುಂಭಾಭಿಷೇಕ ಪುಣೋತ್ಸವದ ಪ್ರಯುಕ್ತ ನಡೆಯಲಿರುವ ನಿಗಮಾಗಮೋಕ್ತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿ ಶ್ರೀ ದೈವ-ದೇವರ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ನಾಗದೇವರ ಹಾಗೂ ಶ್ರೀ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಗ್ರಾಮಸೀಮೆಯ ಹತ್ತು ಸಮಸ್ತರ ಪರವಾಗಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು.
ಜೀರ್ಣೋದ್ಧಾರ ಸಮಿತಿ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಭಕ್ತವೃಂದ ಸಮಿತಿ
ಅನುವಂಶಿಕ ಆಡಳಿತ ಮುಕ್ತಸರರು ಆರ್ಚಕರು,
ಬೆಳ್ಳಳೆ ನಾಲ್ಕು ಪಾಲಿನ ಕುಟುಂಬಸ್ಥರು, ಪಟ್ಟಣದವರು, ನಾಲ್ಕುಕರೆ ಗುರಿಕಾರರು.