August 7, 2025
aaa

ನಮ್ಮ ಸಮಾಜದಲ್ಲಿ ಹಲವು ವಿಧದ ಪ್ರತಿಭೆಗಳಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದು ಮಹತ್ವದ ಕಾರ್ಯವೆಂದು ಯಕ್ಷಕವಿ ಪ್ರೊ. ಪವನ್ ಕಿರಣ್ ಕೆರೆ ಅಭಿಪ್ರಾಯಪಟ್ಟರು.

ಅವರು ಕೆ.ಕೆ. ಎಂಟಟೈನ್ಮೆಂಟ್ ಆಯೋಜಿಸಿದ್ದ ಲಹರಿ 2025 ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿ, ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದರು.

ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮೂಕ್ತೇಸರರಾದ ಆನಂದ ಸಿ. ಕುಂದರ್, ಕೆ.ಕೆ. ಎಂಟಟೈನ್ಮೆಂಟ್ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪುಟ್ಟ ಕಥೆ- ಪುಟ್ಟಿಕಥೆ ಪೋಸ್ಟರ್ ಅನಾವರಣಗೊಳಿಸಿ, “ಭಕ್ತಿ ಸಂಗೀತವು ಮನಸ್ಸಿಗೆ ಆನಂದ ನೀಡುವ ಶ್ರೇಷ್ಟ ಸಾಹಿತ್ಯವಾಗಿದ್ದು, ಈ ಕ್ಷೇತ್ರದಲ್ಲಿ ರಾಘು ರಟ್ಟಾಡಿಯವರ ಕೊಡುಗೆ ಅತ್ಯಂತ ಮೌಲ್ಯಯುತವಾಗಿದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್, ಬಳ್ಮನೆ ಶ್ರೀ ಚತುರ್ಮುಖ ಬ್ರಹ್ಮಶಾರದೆ ದೇವಸ್ಥಾನದ ಆಡಳಿತ ಮೂಕ್ತೇಸರರಾದ ಕರುಣಾಕರ ಶೆಟ್ಟಿಗಾರ್ ಬಳ್ಮನೆ, ಆಲೂರು ಕಲ್ಪತರು ಕಲಾವಿದರು ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ರಾವ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚಲನಚಿತ್ರ ಹಿನ್ನಲೆ ಗಾಯಕಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಮತ್ತು ಸುರೇಶ್ ಕುಮಾರ್ ಕಾರ್ಕಡ ಅವರಿಗೆ ಗಾನಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜಸೇವಕರಾದ ದಿನೇಶ್ ಪೂಜಾರಿ ನಾರ್ಕಳಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಘಟಕರಾದ ಕೆ.ಕೆ. ರಾಘು ರಟ್ಟಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, “ಹೊಸ ಪ್ರತಿಭೆಗಳನ್ನು ಗುರುತಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಮೂಲಕ ಅವರ ಪ್ರತಿಭೆಯನ್ನು ಬೆಳಗಿಸಬೇಕು. ಅದಕ್ಕಾಗಿ ನಾವು ಕರಾವಳಿಯ ಹಲವು ದೇವಾಲಯಗಳ ಭಕ್ತಿ ಗೀತೆಗಳನ್ನು ನಮ್ಮ ಚಾನೆಲ್‌ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ದೇವಾಲಯಗಳ ಪ್ರಸಿದ್ಧಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಲಿದೆ” ಎಂದು ಹೇಳಿದರು.

ಕಾರ್ಯಕ್ರಮ ನಿರೂಪಣೆಯನ್ನು ಮಂಜುನಾಥ ಹಿಲಿಯಾಣ ನಿರ್ವಹಿಸಿದರು.

error: Content is protected !!