
ಪಾಲಕ್ಕಾಡ್ / ಯೆಮನ್ – ಯೆಮನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಶಿಕ್ಷಿತಳಾಗಿರುವ ಪಾಲಕ್ಕಾಡಿನ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಜುಲೈ 16, 2025ರಂದು ಗಲ್ಲು ಶಿಕ್ಷೆ ಜರುಗಲಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತೆ ಹಾಗೂ ಮಧ್ಯಸ್ಥರಾಗಿರುವ ಸಾಮ್ಯುವೆಲ್ ಜೆರೋಮ್ ಸ್ಪಷ್ಟಪಡಿಸಿದ್ದಾರೆ.
ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಕುಮಾರಿಯ ಪವರ್ ಆಫ್ ಅಟಾರ್ನಿಯನ್ನು ಹೊಂದಿರುವ ಸಾಮ್ಯುವೆಲ್, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಯೆಮನ್‌ನ ಜೈಲಿನ ಮುಖ್ಯಸ್ಥರು ನಿನ್ನೆ ನನ್ನೊಂದಿಗೆ ಸಂಪರ್ಕಿಸಿ, ಗಲ್ಲು ಶಿಕ್ಷೆ ಜುಲೈ 16ರಂದು ನಿಶ್ಚಿತಗೊಂಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ” ಎಂದು ಹೇಳಿದರು.
ಘಟನೆ ಹಿನ್ನೆಲೆ:
2014ರಲ್ಲಿ ಉದ್ಯೋಗಾರ್ಥಿ ಯೆಮನ್‌ಗೆ ತೆರಳಿದ್ದ ನಿಮಿಷಾ ಪ್ರಿಯಾ ಅವರು, ಸ್ಥಳೀಯ ವ್ಯಕ್ತಿಯೊಂದಿಗಿನ ವೈಯಕ್ತಿಕ ಹಾಗೂ ಹಣಕಾಸು ಸಂಬಂಧಗಳಿಂದ ಉಂಟಾದ ವಿವಾದದಲ್ಲಿ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಆಗಿದ್ದ ಯೆಮನ್ ಪ್ರಜೆಯ ಸಾವಿಗೆ ಕಾರಣ ಎಂಬ ಆರೋಪದ ಮೇಲೆ ಅವರನ್ನು ಸ್ಥಳೀಯ ನ್ಯಾಯಾಲಯವು ಮರಣದಂಡನೆಗೆ ಗುರಿಪಡಿಸಿತು.
ಅಪೀಲು ಹಾಗೂ ಸಂಧಾನ ವಿಫಲ?
ನಿಮಿಷಾ ಅವರ ಕುಟುಂಬ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಕಳೆದ ಹಲವಾರು ವರ್ಷಗಳಿಂದ ಕ್ಷಮೆಯ ಮನವಿ, ಕಾನೂನು ಪ್ರಕ್ರಿಯೆ ವಿಳಂಬ ಮತ್ತು ಹಣಕಾಸು ಸಂಧಾನದ ಮೂಲಕ ಗಲ್ಲು ಶಿಕ್ಷೆ ತಡೆಗಟ್ಟಲು ಹರಸಾಹಸ ಪಡಿದರೂ ಈವರೆಗೂ ಯಶಸ್ಸು ಸಿಕ್ಕಿಲ್ಲ ಎನ್ನಲಾಗಿದೆ.
‘ಬ್ಲಡ್ ಮನಿ’ ನೀಡುವ ಪ್ರಯತ್ನಗಳೂ ನಡೆದಿದ್ದರೂ, ಮೃತ ಯೆಮನ್ ನಾಗರಿಕನ ಕುಟುಂಬದಿಂದ ಅನುಮತಿ ಸಿಗದ ಕಾರಣ ಗಲ್ಲು ಶಿಕ್ಷೆಗೆ ಇಳಿಕೆಯಾಗದ ಸ್ಥಿತಿ ಮುಂದುವರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.