
ಬೆಂಗಳೂರು: ಈ ವಾರಾಂತ್ಯದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬಗಳು ಸಮೀಪಿಸುತ್ತಿದ್ದು, ಜೊತೆಗೆ ಮಕ್ಕಳಿಗೆ ಬೇಸಿಗೆ ರಜೆ ಕೂಡ ಪ್ರಾರಂಭವಾಗುತ್ತಿದೆ. ಈ ಕಾರಣದಿಂದ ಜನರ ಸಂಚಾರ, ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಮತ್ತು ಪ್ರವಾಸಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ರೈಲುಗಳು ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಭಾರಿ ಓಡಾಟ ಜೋರಾಗಿದೆ.
ಈ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಲಾಭ ಪಡೆಯಲು ಟಿಕೆಟ್ ದರಗಳನ್ನು ಅತಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆಯ ಹಿನ್ನೆಲೆಯಲ್ಲಿ ಊರಿಗೆ ತೆರಳಲು ಸಜ್ಜಾದ ಪ್ರಯಾಣಿಕರು ಖಾಸಗಿ ಬಸ್‌ಗಳ ಹೆಚ್ಚಿದ ದರಗಳಿಂದ ಶಾಕ್ ಅನುಭವಿಸುತ್ತಿದ್ದಾರೆ.
ಮಾರ್ಚ್ 29 ರಂದು ಯುಗಾದಿ ಹಬ್ಬದ ಅಮಾವಾಸ್ಯೆ, ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್ ಹಬ್ಬ ಇರುವ ಕಾರಣ ಜನರು ಮೂರು ದಿನಗಳ ರಜೆ ಪಡೆಯುತ್ತಿದ್ದಾರೆ. ಮಾರ್ಚ್ 28ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಯೋಜನೆ ಮಾಡಿಕೊಂಡಿದ್ದವರಲ್ಲಿ ರೈಲು ಮತ್ತು ಸರ್ಕಾರಿ ಬಸ್‌ಗಳಲ್ಲಿ ಸೀಟುಗಳ ಅಭಾವ ಎದುರಾಗಿದ್ದರೆ, ಖಾಸಗಿ ಬಸ್‌ಗಳಲ್ಲಿ ಹೆಚ್ಚಿದ ದರ ನೀಡಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, “ದುಪ್ಪಟ್ಟಾಗಿ ದರ ಏರಿಕೆ ಮಾಡಿಲ್ಲ, ಆದರೆ ಶೇ. 50 ರಿಂದ 60 ರಷ್ಟು ಮಾತ್ರ ಹೆಚ್ಚಿಸಿದ್ದೇವೆ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಖಾಸಗಿ ಬಸ್ ಮಾಲೀಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಶಕ್ತಿ ಯೋಜನೆಯ ಪರಿಣಾಮವಾಗಿ ಖಾಸಗಿ ಬಸ್ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ರೋಡ್ ಟ್ಯಾಕ್ಸ್, ವಿಮೆ, ಹೊಸ ಬಸ್‌ಗಳ ಖರೀದಿ, ಸ್ಪೇರ್ ಪಾರ್ಟ್ಸ್ ದರ ಸೇರಿದಂತೆ ಎಲ್ಲವೂ ಹೆಚ್ಚಾಗಿರುವ ಕಾರಣ, ಹಬ್ಬದ ಸಮಯದಲ್ಲಿ ದರ ಏರಿಕೆ ಮಾಡಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.