
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿಯೊಂದು ನಡೆದಿದೆ. ಈವರೆಗೆ ಯೋಧರು ಮತ್ತು ಸರ್ಕಾರಿ ಉದ್ಯೋಗಿಗಳೇ ಗುರಿಯಾಗುತ್ತಿದ್ದರೆ, ಈ ಬಾರಿ ಪ್ರವಾಸಿಗರ ಮೇಲೂ ದಾಳಿ ನಡೆದಿದೆ. ಈ ದುರ್ಘಟನೆಯಲ್ಲಿ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಮತ್ತು ಸ್ಥಳೀಯರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ. ಈ ಸಂದರ್ಭ, ಸೌದಿ ಅರೇಬಿಯಾದ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಗೆ ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅವರು ಸಂಜೆ 7 ಗಂಟೆಯ ಸುಮಾರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ ಮೋದಿ ಈ ಹೀನ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ್ದು, “ಇದಕ್ಕೆ ಕಾರಣರಾದ ಯಾರನ್ನೂ ಬಿಡಲಾಗುವುದಿಲ್ಲ. ಅವರು ನ್ಯಾಯದ ಮುಂದೆ ಬರುವ ತನಕ ನಾವು ವಿರಮಿಸೋಲ್ಲ” ಎಂದು ಹೇಳಿದ್ದಾರೆ. ಅವರು ಗಾಯಗೊಂಡವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿ, ಅಗತ್ಯ ಸಹಾಯ ಒದಗಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಇದು ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲಾದ ಅತಿದೊಡ್ಡ ದಾಳಿ” ಎಂದು X (ಹಿಂದಿನ Twitter) ನಲ್ಲಿ ಹೇಳಿದ್ದಾರೆ.
ಇತ್ತ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಗೆ ಕರೆಮಾಡಿ, ಈ ದಾಳಿಯ ಸಂಬಂಧ ಭಾರತಕ್ಕೆ ಅಮೆರಿಕ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.