
ಮೂಡುಬಿದಿರೆ: ಜೈನ್ ಪೇಟೆ ಸಮೀಪದ ದೇವಿಕೃಪಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಎಂಜಿನಿಯರ್ ಸುಧಾಕರ ಆಚಾರ್ಯ (45) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಸಂಜೆಯ ಹೊತ್ತಿಗೆ ಮೂರನೇ ಮಹಡಿಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಪಾರ್ಟ್‌ಮೆಂಟ್ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಸುಧಾಕರ್ ಆಚಾರ್ಯ ಮಲಗಿದ್ದಲ್ಲಿಯೇ ರಕ್ತಸ್ರಾವದಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶವವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬರಬೇಕಾಗಿದೆ. ಮೃತರು ಮೂಲತಃ ಚಿಕ್ಕಮಗಳೂರಿನವರು. ಅವರಿಗೆ ಶಿಕ್ಷಕಿಯಾಗಿರುವ ಪತ್ನಿ ಮತ್ತು 11 ವರ್ಷದ ಪುತ್ರನಿದ್ದಾರೆ. ಘಟನೆ ಸಮಯದಲ್ಲಿ ಪತ್ನಿ ಪುತ್ರನೊಂದಿಗೆ ತನ್ನ ಸಹೋದರನ ಮನೆಯಲ್ಲಿ ಇದ್ದಿದ್ದು, ಘಟನೆಗೆ ಕೆಲ ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.