
ಮಂಗಳೂರಿನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸಾಂತ್ವನ: ಮೂಡಿಗೆರೆಯ ಹಿಂದೂ ಕಾರ್ಯಕರ್ತರಿಂದ ಭೇಟಿ
ಮೂಡಿಗೆರೆ ತಾಲೂಕಿನ ಕೊಟ್ಟೆಗೆಹಾರದ ಹಿಂದೂ ಕಾರ್ಯಕರ್ತರು ಜೂನ್ 10 ರಂದು ಮಂಗಳೂರಿನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿಯ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಅನುಕುಮಾರ್ ಮಾತನಾಡಿ, “ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ)ಗೆ ವಹಿಸಿರುವುದು ಸ್ವಾಗತಾರ್ಹ. ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆಯಾಗಿರುವುದು ನೋವಿನ ಸಂಗತಿಯಾಗಿದೆ. ಮಂಗಳೂರು ಪ್ರದೇಶದಲ್ಲಿ ಇಂತಹ ಕ್ರೂರ ಕೃತ್ಯಗಳು ಪುನರಾವೃತಿಯಾಗಬಾರದು. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವ ಪ್ರಾಮುಖ್ಯತೆ ಇದೆ,” ಎಂದು ಹೇಳಿದರು.
ಹಿಂದೂ ಮುಖಂಡ ಸಂಜಯ್ ಗೌಡ ಮಾತನಾಡಿ, “ಸುಹಾಸ್ ಶೆಟ್ಟಿ ಸದಾ ಶ್ರದ್ಧೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ದಕ್ಷ ನಾಯಕರು. ಅವರ ಮರಣವು ಹಿಂದೂ ಸಮಾಜಕ್ಕೆ ಭಾರೀ ನಷ್ಟವಾಗಿದೆ. ಅವರ ಕುಟುಂಬಕ್ಕೆ ಯಾವಾಗಲೂ ಸಹಾಯ ಮಾಡಲು ನಾವು ಸಿದ್ಧರಾಗಿದ್ದೇವೆ,” ಎಂದರು.
ಕಾರ್ಯಕ್ರಮದ ವೇಳೆ ಸುಹಾಸ್ ಶೆಟ್ಟಿಯ ಕುಟುಂಬಕ್ಕೆ ಕಾರ್ಯಕರ್ತರ ವತಿಯಿಂದ ಧನ ಸಹಾಯ ನೀಡಲಾಯಿತು.
ಈ ವೇಳೆ ತ್ರಿಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘು, ಬಿಜೆಪಿ ಮುಖಂಡ ಕನ್ನೇಹಳ್ಳಿ ಭರತ್, ಜಿಲ್ಲಾ ಎಸ್‌ಸಿ ಮೋರ್ಚಾ ಮುಖಂಡ ಸುಜೀತ್, ದೇವರಾಜ್, ಕೆಂಪೇಗೌಡ, ಒಕ್ಕಲಿಗರ ಸಂಘದ ಬ್ರಿಜೇಶ್ ಕಡಿದಾಳ್, ಪ್ರಸಾದ್, ಜೆಡಿಎಸ್ ಮುಖಂಡ ಸಂಪತ್, ಹಿಂದೂ ಕಾರ್ಯಕರ್ತರಾದ ಮಧು ಹೆಗ್ಗರವಳ್ಳಿ, ಕಾರ್ತಿಕ್ ಪಟ್ಟದೂರು, ಎ.ಆರ್. ಅಭಿಲಾಷ್, ವಿನಯ್, ಉತ್ತಮ್, ಪ್ರದೀಪ್ ಬಿನ್ನಡಿ ಸೇರಿದಂತೆ 70ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.