March 21, 2025
1

ಮುಲ್ಕಿ ಸಮೀಪದ ಕಕ್ವಗುತ್ತಿನ ಎನ್.ಎಸ್. ಮನೋಹರ ಶೆಟ್ಟಿ (87) ಅವರು ಅನಾರೋಗ್ಯದ ಕಾರಣದಿಂದ ಬುಧವಾರ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರತಿಷ್ಠಿತ ವಿಜಯ ಬ್ಯಾಂಕ್‌ನ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅವರು, ಮುಲ್ಕಿ ಸುಂದರ್ ರಾಮ್ ಶೆಟ್ಟಿ ಟ್ರಸ್ಟ್‌ನ ಗೌರವ ಸಲಹೆಗಾರರಾಗಿದ್ದರು.

ಇದಲ್ಲದೆ, ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಅವರ ಅಗಲಿಕೆಗೆ ಬೆಂಗಳೂರು ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಬಪ್ಪನಾಡು ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ಶಾಸಕರು, ಮಾಜಿ ಸಚಿವರು, ರಾಜಕೀಯ ಮುಖಂಡರು, ಉದ್ಯಮಿಗಳು, ಸಮಾಜ ಸೇವಕರು, ಧಾರ್ಮಿಕ ಮುಖಂಡರು, ಬಂಟರ ಸಂಘದ ಪ್ರತಿನಿಧಿಗಳು ಹಾಗೂ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂತಿಮ ಸಂಸ್ಕಾರ ಬುಧವಾರ ಸಂಜೆ 4 ಗಂಟೆಗೆ ಮುಲ್ಕಿ ಕುಬೆವೂರು ಕೆಳಗಿನ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.”