August 6, 2025
IMG-20250304-WA0008-1

ರಾಜ್ಯದ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನ ಹಾಗೂ ಭತ್ಯೆಗಳಲ್ಲಿ ಹೆಚ್ಚಳ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದ ‘ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025’ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. ರಾಜ್ಯಪಾಲರ ಅನುಮೋದನೆ ದೊರಕಿದ ಕೂಡಲೇ ಈ ತಿದ್ದುಪಡಿ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

ಸಂವಿಧಾನೀಕ ಪ್ರಕ್ರಿಯೆಯಂತೆ, ಸದನದಲ್ಲಿ ಈ ವಿಧೇಯಕ ಮಂಡನೆಯಾಗುವುದಕ್ಕೂ ಮುನ್ನ ರಾಜ್ಯಪಾಲರ ಅನುಮೋದನೆ ಅಗತ್ಯವಿದೆ. ಈಗ ರಾಜ್ಯಪಾಲರಿಂದ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಈ ಮಸೂದೆ ಶೀಘ್ರವೇ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿರುವ ನಿರೀಕ್ಷೆಯಿದೆ.

ಈ ತಿದ್ದುಪಡಿಯ ಪ್ರಕಾರ, ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರ ಸಂಬಳವು ಹೆಚ್ಚಳವಾಗಲಿದ್ದು, ಇದರಿಂದಾಗಿ ಅವರ ವೇತನ ಹಾಗೂ ಭತ್ಯೆಗಳಲ್ಲಿ ಗಣನೀಯ ಪರಿವರ್ತನೆಯಾಗಲಿದೆ.

ನೂತನ ಸಂಬಳ ವಿವರ:

  • ಮುಖ್ಯಮಂತ್ರಿ ಸಂಬಳ: ₹75,000 → ₹1,50,000
  • ಸಚಿವರ ಸಂಬಳ: ₹60,000 → ₹1,25,000
  • ಮುಖ್ಯಮಂತ್ರಿ, ಸಚಿವರ ಆತಿಥ್ಯ ಭತ್ಯೆ: ₹4,50,000 → ₹5,00,000
  • ಸಚಿವರ ಮನೆ ಬಾಡಿಗೆ ಭತ್ಯೆ: ₹1,20,000 → ₹2,50,000
  • ರಾಜ್ಯ ಸಚಿವರ ಸಂಬಳ: ₹50,000 → ₹75,000
  • ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ: ₹1,20,000 → ₹2,00,000
  • ಶಾಸಕರ ಸಂಬಳ: ₹40,000 → ₹80,000

ಈ ಪರಿಷ್ಕೃತ ಸಂಬಳ ಹಾಗೂ ಭತ್ಯೆಗಳನ್ನು ಜನಪ್ರತಿನಿಧಿಗಳ ಸೇವಾ ಸೌಲಭ್ಯಗಳ ಸುಧಾರಣೆ ಮತ್ತು ಭವಿಷ್ಯ ಭದ್ರತೆಗೆ ಸಹಾಯಕವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ, ಸಾಮಾನ್ಯ ಜನತೆ ಮೇಲೆ ತೆರಿಗೆ ಭಾರ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಶಾಸಕರ ಸಂಬಳ ದುಪ್ಪಟ್ಟಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಈ ತಿದ್ದುಪಡಿಯ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಜನರ ಪ್ರತಿಕ್ರಿಯೆ ಹಾಗೂ ರಾಜಕೀಯ ವಲಯದಲ್ಲಿ ಈ ಬೆಳವಣಿಗೆಗಳ ಪರಿಣಾಮ ಹೇಗಿರಬಹುದು ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ.

error: Content is protected !!