
ಮಂಗಳೂರು: 2007 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಮತ್ತು 2008 ರ ಮುಂಬಯಿ ಸರಣಿ ಸ್ಫೋಟಗಳ ಪ್ರಮುಖ ಆರೋಪಿಯೂ ಆಗಿದ್ದ ಉಗ್ರ ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಎಂಬವನನ್ನು ಮಂಗಳೂರು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಯುಎಪಿ ಕಾಯ್ದೆ ಹಾಗೂ ಎಕ್ಸ್‌ಪ್ಲೋಸಿವ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತೆಲಂಗಾಣದ ಚೆರ್ಲಪಲ್ಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅಕ್ಬರ್ ಚೌಧರಿಯನ್ನು ಉಳ್ಳಾಲ ಪೊಲೀಸರು ಬಾಡಿ ವಾರಂಟ್ ಪಡೆದು, ತೆಲಂಗಾಣ ಪೊಲೀಸರ ಸಮ್ಮುಖದಲ್ಲಿ ಮಂಗಳೂರು ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ವಕೀಲರನ್ನು ನೇಮಿಸಲು ಅವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದ್ದಾರೆ. ತಾತ್ಕಾಲಿಕವಾಗಿ ಆರೋಪಿಯನ್ನು ಪುನಃ ತೆಲಂಗಾಣ ಜೈಲಿಗೆ ವಾಪಸ್ಸು ಕರೆದೊಯ್ಯಲಾಗಿದೆ.
ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ಅಲ್ಲಿನ ಮೆಟ್ರೋಪೊಲಿಟನ್ ನ್ಯಾಯಾಲಯ ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನೀಖ್ ಶಫೀಕ್ ಸಯ್ಯದ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿದ್ದರೆ, ಮೂರನೇ ಆರೋಪಿ ಮೊಹಮ್ಮದ್ ತಾರಿಕ್ ಅಂಜುಂಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇವರನ್ನು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯರು ಎಂದು ಆರೋಪಿಸಲಾಗಿದೆ.
ಅಕ್ಬರ್ ಚೌಧರಿ 2007 ರ ಹೈದರಾಬಾದ್ ಸ್ಫೋಟದ ಸಂಚುಕೊಳುವಲ್ಲಿ ಭಾಗಿಯಾಗಿದ್ದನು. ಈತನ ಚಟುವಟಿಕೆ ಉಳ್ಳಾಲದ ಚೆಂಬುಗುಡ್ಡೆ ಮುಕ್ಕಚ್ಚೇರಿ ಪ್ರದೇಶದಲ್ಲಿ ನಡೆದಿದ್ದು, ಹೈದರಾಬಾದ್ ಬ್ಲಾಸ್ಟ್‌ನಲ್ಲಿ ಬಳಸಿದ ಸ್ಫೋಟಕಗಳನ್ನು ಕೂಡ ಇದೇ ಪ್ರದೇಶದಿಂದ ಪೂರೈಸಲಾಗಿತ್ತು ಎನ್ನಲಾಗಿದೆ.
ಅಕ್ಬರ್ ಚೌಧರಿ ಮೂಲತಃ ಪುಣೆಯ ಕೊಂಧ್ವಾ ಖುದ್‌ನ ಮಿಥಾ ನಗರ ನಿವಾಸಿ. ಭಟ್ಕಳದ ಯಾಸೀನ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಮೂಲಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ್ದ. ಕಂಪ್ಯೂಟರ್ ಹಾರ್ಡ್‌ವೇರ್ ತಜ್ಞನಾಗಿದ್ದ ಈತ ಚಾಲಕನಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದ. ಮುಂಬಯಿ, ಪುಣೆ, ಹೈದರಾಬಾದ್ ಮತ್ತು ಮಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಈತನ ಚಟುವಟಿಕೆಗಳು ನಡೆದಿದ್ದವು.