
ಟ್ಕಳ: ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ – ಓರ್ವರ ಮೃತ್ಯು, ಮತ್ತೋರ್ವ ನಾಪತ್ತೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಮುರ್ಡೇಶ್ವರದಲ್ಲಿ ಜುಲೈ 10ರ ಗುರುವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ, ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮತ್ತೋರ್ವ ನಾಪತ್ತೆಯಾಗಿದ್ದಾರೆ.
ಜನಾರ್ಧನ ಎ. ಹರಿಕಾಂತ ಅವರಿಗೆ ಸೇರಿದ ಗೆಲ್ನೇಟ್ ದೋಣಿಯಲ್ಲಿ ನಾಲ್ವರು ಮೀನುಗಾರರು ಮುರ್ಡೇಶ್ವರದಿಂದ ಸಮುದ್ರದತ್ತ ತೆರಳಿದ್ದಾಗ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿಬಿತ್ತು.
ಈ ದುರಂತದಲ್ಲಿ ಮಾಧವ ಹರಿಕಾಂತ (45) ಎಂಬವರು ನೀರಿನಲ್ಲಿ ಮುಳುಗಿದ್ದು, ಅವರನ್ನು ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮತ್ತೊಬ್ಬ ಮೀನುಗಾರ ವೆಂಕಟೇಶ ಅಣ್ಣಪ್ಪ ಹರಿಕಾಂತ (26) ನಾಪತ್ತೆಯಾಗಿದ್ದು, ಈತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇನ್ನಿಬ್ಬರು – ಆನಂದ ಅಣ್ಣಪ್ಪ ಹರಿಕಾಂತ ಹಾಗೂ ಇನ್ನೊಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಕುರಿತು ತಿಳಿಯುತ್ತಿದ್ದಂತೆ ಮುರ್ಡೇಶ್ವರ ಠಾಣೆಯ ಪೊಲೀಸರು, ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಮೀನುಗಾರರು ಹಾಗೂ ನಾಗರಿಕರು ಸೇರಿ ನಾಪತ್ತೆಯಾದ ವ್ಯಕ್ತಿಯಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.