
ಬೆಳಗಾವಿ: ಮಾರ್ಚ್ 31ರ ನಂತರ ಗೃಹಲಕ್ಷ್ಮಿ ಯೋಜನೆಯ ಬಾಕಿಯಿರುವ ಎರಡು ಕಂತುಗಳ ಹಣ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಎರಡು ತಿಂಗಳ ಗೃಹಲಕ್ಷ್ಮಿ ನೀಡಿದ್ದೇವೆ. ಹಾಗೆಯೇ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ.2 ಸಾವಿರ ಹೆಚ್ಚಿಸಿದ್ದೆವು. ಆ ಬಳಿಕ ಯಾವುದೇ ಸರ್ಕಾರ ಇದನ್ನು ಹೆಚ್ಚಿಸಿಲ್ಲ. ಈ ಬಜೆಟ್‌ನಲ್ಲಿ ಕಾರ್ಯಕರ್ತೆಯರ ಗೌರವಧನಕ್ಕೆ ರೂ.1,000 ಮತ್ತು ಸಹಾಯಕಿಯರ ಗೌರವಧನಕ್ಕೆ ರೂ.750 ಹೆಚ್ಚಳ ಘೋಷಿಸಲಾಗಿದೆ. ಇದನ್ನು ಶೀಘ್ರವೇ ಜಾರಿಗೆ ತರುತ್ತೇವೆ” ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಒಬ್ಬ ಸಚಿವರನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿರುವುದು ವಿಷಾದನೀಯ. ಈ ಕುರಿತು ರಾಜಣ್ಣ ಅವರು ತಮ್ಮ ಅನುಭವವನ್ನು ಸದನದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು ಈ ವಿಚಾರವನ್ನು ನೋಡಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ” ಎಂದರು.
“ಘರ್ಜಿಸುವ ಹುಲಿಗಳನ್ನು ಗುರಿಯಾಗಿಸಿ ಬೆದರಿಸಲಾಗುತ್ತಿದೆ” ಎಂಬ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತ, “ಈ ಬಗ್ಗೆ ಅವರನ್ನೇ ಕೇಳಬೇಕು” ಎಂದು ಉತ್ತರಿಸಿದರು.