
ವಿದ್ಯುತ್ ಶಾಕ್‌ನಿಂದ ಪವರ್ ಮ್ಯಾನ್ ಸಾವಿಗೀಡಾದ ದುರ್ಘಟನೆ
ಭಾರೀ ಮಳೆಯ ಪರಿಣಾಮವಾಗಿ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಒಬ್ಬರು ಮೃತಪಟ್ಟ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಮರ್ ಜಾಲು ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿ ವಿಜೇಶ್ ಜೈನ್ (27) ಅವರು ಕುವೆಟ್ಟು ಗ್ರಾಮದ ನಿವಾಸಿಯಾಗಿದ್ದು, ಸಹಾಯಕ ಪವರ್ ಮ್ಯಾನ್ ಆಗಿದ್ದರು. ಅವರು HT ಲೈನ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಪ್ರವಹಿಸಿ ಘಟನೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಜೇಶ್, ಕೆಂಜಿಲ ಮನೆಯ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಪುತ್ರರಾಗಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ದಿನ ಮಳೆ ಅರ್ಭಟಕ್ಕೆ ಐದು ಮಂದಿ ಬಲಿ
ವಿಜೇಶ್ ಅವರ ಸಾವಿನೊಂದಿಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸಂಬಂಧಿತ ದುರ್ಘಟನೆಗಳಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಮುಂಜಾನೆ ಉಳ್ಳಾಲ ತಾಲೂಕಿನ ದೇರಳಕಟ್ಟೆ ಬಳಿ ಭೂಕುಸಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅದೇ ರೀತಿಯಾಗಿ ಕೊಂಪೆಪದವು ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ವೃದ್ಧೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.