August 6, 2025
siren

ಉಡುಪಿ: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಲ್ಪೆಯ ಬಾಪುತೋಟದಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಾಗರಿಕ ರಕ್ಷಣೆಯ ಅಂಗವಾಗಿ ಅಣಕು ಕಾರ್ಯಾಚರಣೆ (Mock Drill) ನಡೆಸಲಾಯಿತು.

ಸಂಜೆ 4 ಗಂಟೆಗೆ ಶಿಪ್‌ಯಾರ್ಡ್‌ನಲ್ಲಿ ಸೈರನ್ ಮೊಳಗಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ಮತ್ತು ಅನಿಲ ಸಂಪರ್ಕವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಸ್ಥಳದಲ್ಲಿದ್ದ ಉದ್ಯೋಗಿಗಳನ್ನು ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ, ಅಂತರಂಗದಲ್ಲಿ ಯಾರಾದರೂ ಉಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಶೋಧ ಕಾರ್ಯಾಚರಣೆ ನಡೆಸಲಾಯಿತು. ಎಲ್ಲಾ ಕಾರ್ಯಾಚರಣೆಗಳು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ನಂತರ 4.30ರ ವೇಳೆಗೆ ಕಾರ್ಯ ಪುನರಾರಂಭವಾಯಿತು.

ಈ ರಕ್ಷಣಾತ್ಮಕ ಅಭ್ಯಾಸದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು. ಜಿಲ್ಲೆಗಳಲ್ಲಿ ಇಂಥ ಮಹತ್ವದ ಘಟಕಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಯ ಡ್ರಿಲ್ಲುಗಳನ್ನು ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲೆ ಅಗ್ನಿಶಾಮಕದಳದ ಅಧಿಕಾರಿ ವಿನಾಯಕ ಕಲ್ಲುಟ್ಕರ್ ತಿಳಿಸಿದ್ದಾರೆ.

ಈ ಮಧ್ಯೆ, ರಾಷ್ಟ್ರದಾದ್ಯಂತ ಯುದ್ಧ ಭೀತಿಯ ವಾತಾವರಣವಿರುವುದರಿಂದ ಕರಾವಳಿ ಪ್ರದೇಶಗಳಲ್ಲಿ ಭದ್ರತೆ ವೃದ್ಧಿಸಲಾಗಿದೆ. ಕರಾವಳಿ ಕಾವಲುಪಡೆಯವರು ನಿತ್ಯ ಗಸ್ತು ಕ್ರಮ ವಹಿಸುತ್ತಿದ್ದು, ರಾಜ್ಯದ 50 ತೀರ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಮುದ್ರ ತೀರಕ್ಕೆ ಬರುವ ಎಲ್ಲಾ ಬೋಟ್‌ಗಳನ್ನು, ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ.

error: Content is protected !!