August 7, 2025
IMG-20250408-WA0008

ಚಿಕ್ಕಮಗಳೂರು ಮಲೆನಾಡಿನಲ್ಲಿ ಭಾರೀ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಮಳೆ ಮದ್ದಲೆಯಿಂದ ಆರಂಭವಾಗಿ ಸಂಜೆವರೆಗೆ ನಿರಂತರವಾಗಿ ಸುರಿದ ಕಾರಣ, ರಸ್ತೆಗಳ ಮೇಲೆ ಮರಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕಳಸ ತಾಲೂಕಿನ ಹಲವು ಕಡೆಗಳಲ್ಲಿ ಮರಗಳು ಮನೆಗಳ ಮೇಲೆ ಉರುಳಿದ ಪರಿಣಾಮ, ಮನೆಗಳಿಗೆ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಸಹ ಆಲಿಕಲ್ಲು ಸಹಿತ ಭಾರೀ ಮಳೆ ಸುರಿಯಿತು. ಇದರ ಪರಿಣಾಮವಾಗಿ ಕೆಲಕಾಲ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ಇತ್ತೀಚೆಗೆ ವಾರದಷ್ಟು ಕಾಲ ಸಾಧಾರಣ ಮಳೆಯಾಗುತ್ತಿದ್ದರೆ, ಮಂಗಳವಾರದ ಮಳೆ ಭಾರೀ ಪ್ರಮಾಣದಲ್ಲಿ ಆರ್ಭಟಿಸಿದ್ದು, ಕಳಸ, ಮೂಡಿಗೆರೆ, ಕೊಪ್ಪ, ಶೃಂಗೇರಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಗುಡುಗು, ಸಿಡಿಲು, ಗಾಳಿಯೊಂದಿಗೆ ಮಳೆ ಸುರಿಯಿತು.

ಕಳಸ ತಾಲೂಕಿನ ನೆಲ್ಲಿಬೀಡು, ಅಜ್ಜಿಗದ್ದೆ, ತನೂಡಿ, ಆಳಗೋಡು ಪ್ರದೇಶಗಳಲ್ಲಿ ಮರಗಳು ಮನೆಗಳ ಮೇಲೆ ಬಿದ್ದು ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕವೂ ಕತ್ತಡವಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಜಾವಳಿ, ಸುಂಕಸಾಲೆ, ಮರಸಣಿಗೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಸುರಿಯಿತು. ಇದರಿಂದಾಗಿ ಕಾಫಿ ಬೆಳೆಗಳಿಗೆ ನಷ್ಟ ಸಂಭವಿಸುವ ಆತಂಕ ಬೆಳೆಗಾರರಲ್ಲಿ ಮೂಡಿದೆ.

ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲೂ ಮಂಗಳವಾರ ಧಾರಾಕಾರ ಮಳೆಯಾಗಿದೆ. ಈ ಮಳೆಯಿಂದಾಗಿ ಹಲವು ಗಂಟೆಗಳ ಕಾಲ ಜನಜೀವನ ಸ್ಥಂಭಿತಗೊಂಡಿತ್ತು.

ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ರೆ, ಇತರ ಭಾಗಗಳಲ್ಲಿ ಮೋಡಕವಿದ ವಾತಾವರಣ ಕಂಡುಬಂದಿತು. ಕಡೂರು, ತರೀಕೆರೆ, ಅಜ್ಜಂಪುರ ಭಾಗಗಳ ರೈತರು ಭಾರೀ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ.

ಹೀಗಾಗಿ, ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾಫಿ ಮತ್ತು ಅಡಿಕೆ ಬೆಳೆಗಾರರು ಸಂತೋಷಪಟ್ಟಿದ್ರೂ, ಕೆಲವೆಡೆ ಸುರಿದ ಆಲಿಕಲ್ಲು ಮಳೆ ಬೆಳೆಗಳಿಗೆ ಹಾನಿಯಾಗುವ ಭೀತಿಯಿದೆ. ಇತ್ತ, ಮಳೆಯಿಂದಾಗಿ ಬಿಸಿಲಿನ ತೀವ್ರತೆಯೂ ಕಡಿಮೆಯಾಗಿ ಜನತೆ ಸ್ವಲ್ಪ ರಿಲೀಫ್ ಅನುಭವಿಸಿದ್ದಾರೆ.

error: Content is protected !!