
ಮುಂಬೈ:
ಮನೆಯೊಳಗಿನ ಅಡುಗೆ ಅನಿಲ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಭಾರೀ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪವಾಡಸದೃಶವಾಗಿ ಈ ಭಯಾನಕ ಘಟನೆಯಿಂದ ಇಬ್ಬರು ಜೀವಪಾಯದಿಂದ ಪಾರಾಗಿದ್ದಾರೆ.
ಸಿಲಿಂಡರ್ ಸ್ಫೋಟದ ತಕ್ಷಣ ಮನೆ ತುಂಬ ಬೆಂಕಿ ಆವರಿಸಿಕೊಂಡರೂ, ಇಬ್ಬರೂ ತಕ್ಷಣ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗುತ್ತದೆ.
ಘಟನೆಯ ಸ್ಥಳ ನಿಖರವಾಗಿ ತಿಳಿದಿಲ್ಲ, ಆದರೆ ಜೂನ್ 18ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿರುವುದು ದೃಶ್ಯಗಳಿಂದ ತಿಳಿಯಬಹುದು. ಪೈಪ್‌ನಿಂದ ಎಲ್‌ಪಿಜಿ ಗ್ಯಾಸ್ ಸೋರಿಕೆಯಾಗುತ್ತಿದ್ದರೆ, ಮಧ್ಯವಯಸ್ಸಿನ ಮಹಿಳೆ ಗ್ಯಾಸ್ನ ಸೋರಿಕೆ ತಡೆಯಲು ಶ್ರಮಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿತ್ತು. ಆದರೆ ಪ್ರಯತ್ನ ವಿಫಲವಾದುದರಿಂದ, ಅವರು ತಕ್ಷಣ ಸಹಾಯಕ್ಕಾಗಿ ಮನೆಯಿಂದ ಹೊರಗಡೆ ಹೋಗುತ್ತಾರೆ.
ಇನ್ನೊಂದೆಡೆ, ಮನೆಯೊಳಗಿನ ಗ್ಯಾಸ್ನ ಸೋರಿಕೆ ಮುಂದುವರಿಯುತ್ತಲೇ ಇರುತ್ತದೆ. ಕೆಲವೇ ಕ್ಷಣಗಳಲ್ಲಿ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಗೆ ಹಿಂತಿರುಗುತ್ತಾರೆ. ಮಹಿಳೆ ಹಾಗೂ ಪುರುಷನು ಬೇರೆ ಬಾಗಿಲುಗಳಿಂದ ಅಡುಗೆಮನೆಗೆ ಪ್ರವೇಶಿಸಿ, ಗ್ಯಾಸ್ನ ಪೈಪ್‌ನ ನಾಬ್ ಮುಚ್ಚಲು ಪ್ರಯತ್ನಿಸುತ್ತಿದ್ದ ಸಮಯದಲ್ಲೇ ಭಾರೀ ಸ್ಫೋಟ ಸಂಭವಿಸಿ, ಅಡುಗೆಮನೆಯು ಬೆಂಕಿಗೆ ಆಹುತಿಯಾಗುತ್ತದೆ.
ಅದೃಷ್ಟವಶಾತ್, ಗ್ಯಾಸ್ನ ಸೋರಿಕೆಯ ವೇಳೆಯಲ್ಲಿ ಮಹಿಳೆ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯಲಾಗಿದ್ದರಿಂದ ಸ್ಫೋಟದ ತೀವ್ರತೆ ಕಡಿಮೆಯಾಯಿತು. ಈ ಕಾರಣದಿಂದಾಗಿ ಇಬ್ಬರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಸುರಕ್ಷಿತವಾಗಿ ಮನೆಬಿಟ್ಟು ಪಾರಾಗಿದ್ದಾರೆ.
ಅಡುಗೆಮನೆಯಲ್ಲಿದ್ದ ಗ್ಯಾಸ್ನ ಸ್ಟೌವ್‌ನಿಂದ ಬೆಂಕಿ ಹೊತ್ತಿಕೊಂಡು ಇಡೀ ಮನೆಗೆ ವ್ಯಾಪಿಸಿದರೂ, ಸಣ್ಣ ಪ್ರಮಾಣದ ಸ್ಫೋಟವೇ ಸಂಭವಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.