
ಉಡುಪಿ: ಲಚ್ಚಿಲ್ ಪುತ್ತೂರು ಪ್ರದೇಶದಲ್ಲಿ “ಮಂತ್ರದೇವತೆ ಸಾನಿಧ್ಯ ಲಚ್ಚಿಲ್” ಎಂಬ ಹೆಸರಿನ ಬೋರ್ಡ್‌ನ್ನು ಹಾನಿಗೊಳಿಸಿ, ಅದರ ಮೇಲೆ ಇರುವ ಪೈಂಟಿಂಗ್ ಅಳಿಸಿ, ಕಸವನ್ನು ಸ್ಥಳದಲ್ಲೇ ಹರಿದು ಹಾಕಿರುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಲಚ್ಚಿಲ್ ನಿವಾಸಿ ಮಹೇಶ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಈ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರು ವರ್ಷಗಳಿನಿಂದ ಒಗ್ಗಟ್ಟಿನಿಂದ ಬದುಕು ಸಾಗಿಸುತ್ತಿದ್ದು, ಈ ಸೌಹಾರ್ದತೆಯನ್ನು ನಿಷ್ಪ್ರಭಗೊಳಿಸಲು ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಲಾಗಿದೆ. ದೂರುದಾರ ಮಹೇಶ್, ಈ ಕೃತ್ಯಕ್ಕೆ ತಮ್ಮ ತಮ್ಮನಾದ ರೂಪೇಶ್ ಪಾತ್ರವಹಿಸಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇಬ್ಬರ ನಡುವೆ ವೈಯಕ್ತಿಕ ಅಸಮಾಧಾನವಿದ್ದ ವಿಚಾರವನ್ನು ಕೂಡ ಉಲ್ಲೇಖಿಸಲಾಗಿದೆ.
ಮಾಹಿತಿ ದೊರೆಯುತ್ತಿದ್ದಂತೆ, ವೃತ್ತ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ್ ಅವರ ಮಾರ್ಗದರ್ಶನದಲ್ಲಿ ಹೆಡ್ ಕಾನ್ಸೆಬಲ್ ಸಂತೋಷ್ ಕುಂದಾಪುರ, ಬಶೀರ್ ಹಾಗೂ ಗಡ್ಡಯ್ಯ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳೀಯ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಗುಪ್ತ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದ್ದು, ಮಹೇಶ್ ಅವರ ತಮ್ಮ ರೂಪೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.