
ದರ್ಬಾರ್ ಮಾಡುತ್ತಿದ್ದ ಅಧಿಕಾರಿಗೆ ಕೊನೆಗೂ ಅಮಾನತು ಶಾಕ್!
ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿಡಿ ಕೃಷ್ಣವೇಣಿಯನ್ನು ಕೊನೆಗೂ ಅಮಾನತು ಮಾಡಲಾಗಿದೆ. ಇಲಾಖೆ ತನಿಖೆ ಮುಂದುವರಿಸಿರುವಾಗಲೇ, ಅಧೀನ ಕಾರ್ಯದರ್ಶಿ ಮಂಜುನಾಥ್ ಭಾನುವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೃಷ್ಣವೇಣಿಯನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶನಿವಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಕೃಷ್ಣವೇಣಿಯ ವಿರುದ್ಧ ಇದೇ ಎರಡನೇ ಬಾರಿ ಲೋಕಾಯುಕ್ತ ದಾಳಿ ನಡೆದಿದ್ದು, ಈ ವೇಳೆ 12 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇತ್ತೀಚೆಗೆ, ಉಳ್ಳಾಲ ತಾಲೂಕಿನ ಇರಾ ಗ್ರಾಮದ ವ್ಯಕ್ತಿಯೊಬ್ಬರ ಬಳಿ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಸರ್ಕಾರದ ನಿಯಮದ ಪ್ರಕಾರ, 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು. ಆದರೆ ಕೃಷ್ಣವೇಣಿ 18 ದಿನ ಜೈಲಿನಲ್ಲಿ ಇದ್ದರೂ ಈ ನಿಯಮವನ್ನು ಪಾಲಿಸಲಾಗಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಸಾರ್ವಜನಿಕರಿಂದ ಕಿಡಿ ವ್ಯಕ್ತವಾಯಿತು.
ಜಾಮೀನಿನಲ್ಲಿ ಹೊರಬಂದ ಕೃಷ್ಣವೇಣಿ ಹೈಕೋರ್ಟ್‌ನಿಂದ ಅಮಾನತು ನಿರ್ಬಂಧಿತ ಆದೇಶ ತಂದು ಮತ್ತೆ ತಮ್ಮ ಹಳೆಯ ಸ್ಥಾನಕ್ಕೆ ಹಿಂತಿರುಗಿದ್ದರು. ನಂತರ ಕಚೇರಿಯಲ್ಲಿ ಮರುದರ್ಬಾರ್ ನಡೆಸುತ್ತಿರುವ ಬಗ್ಗೆ ಮತ್ತೆ ಸಾರ್ವಜನಿಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೂ ಅವರನ್ನು ಅಮಾನತು ಮಾಡಲಾಗಿದೆ.