August 6, 2025
mangalore-ccb-police-119069660

ಮಂಗಳೂರು ನಗರದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯ ವೇಳೆ, ಪೊಲೀಸರು ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ನಗರ ಅಪರಾಧ ವಿಭಾಗದ ತಂಡ, ಮಾದಕ ವಸ್ತುಗಳ ಜಾಲವನ್ನು ಪತ್ತೆಹಚ್ಚಲು ನಡೆಸಿದ ಕಾರ್ಯಾಚರಣೆಯಲ್ಲಿ, ದಕ್ಷಿಣ ಆಫ್ರಿಕಾ ದೇಶದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿ, ಸುಮಾರು 75 ಕೋಟಿ ರೂಪಾಯಿ ಮೌಲ್ಯದ 37.870 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ ಪಂಪ್‌ವೆಲ್ ಬಳಿಯ ಲಾಡ್ಜ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹೈದರ್ ಅಲಿ ಎಂಬಾತನನ್ನು ಬಂಧಿಸಿದಾಗ, 15 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. ಈ ಪ್ರಕರಣವನ್ನು ತನಿಖೆ ಮಾಡಿದ ಪೊಲೀಸರು, ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾದ ಪ್ರಜೆ ಪೀಟರ್ ಐಕೇಡಿ ಬೆಲೋನ್ವು ಎಂಬಾತನನ್ನು ಬಂಧಿಸಿ, 6.248 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದರು.

ತನಿಖೆಯ ಮುಂದುವರಿದ ಹಂತದಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರೆತಿದ್ದು, ದಿಲ್ಲಿಯಿಂದ ಬೆಂಗಳೂರಿಗೆ ಹಾಗೂ ಇತರ ನಗರಗಳಿಗೆ ವಿಮಾನ ಮಾರ್ಗದ ಮೂಲಕ ಮಾದಕ ವಸ್ತು ಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿತು.

ಈ ಮಾಹಿತಿ ಆಧರಿಸಿ, ಮಾ.14 ರಂದು ದಿಲ್ಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಕ್ಷಿಣ ಆಫ್ರಿಕಾ ಪ್ರಜೆಗಳಾದ ಬಂಬಾ ಫಾಂಟಾ ಅಲಿಯಾಸ್ ಅಡೋನಿಸ್ ಜುಬುಲಿಲೆ (31) ಮತ್ತು ಅಬಿಗೈಲ್ ಅಡೋನಿಸ್ (30) ಅವರನ್ನು ಬಂಧಿಸಲಾಯಿತು.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ ಎರಡು ಟ್ರಾವೆಲ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ 37.878 ಕೆಜಿ ಎಂಡಿಎಂಎ, 4 ಮೊಬೈಲ್ ಫೋನುಗಳು, 2 ಪಾಸ್‌ಪೋರ್ಟ್, 18,460 ರೂಪಾಯಿ ನಗದು ಮತ್ತು ಇತರ ವಸ್ತುಗಳು ಪತ್ತೆಯಾಗಿವೆ.

ಆರೋಪಿಗಳು ದಿಲ್ಲಿಯಿಂದ ಮಾದಕ ವಸ್ತುಗಳನ್ನು ವಿಮಾನದ ಮೂಲಕ ಬೆಂಗಳೂರು ಹಾಗೂ ಇತರ ಸ್ಥಳಗಳಿಗೆ ಸಾಗಾಟ ಮಾಡುತ್ತಿದ್ದರು. ನೈಜೀರಿಯಾ ಪ್ರಜೆಗಳು ಮತ್ತು ಇತರ ಗ್ರಾಹಕರಿಗೆ ಈ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತ, ಅಪಾರ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಹತ್ವದ ಕಾರ್ಯಾಚರಣೆಯಲ್ಲಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್ ಮತ್ತು ಕೆ. ರವಿಶಂಕರ್ ಅವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ತಂಡದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ., ಪಿಎಸ್‌ಐಗಳಾದ ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐಗಳಾದ ಮೋಹನ್ ಕೆ.ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!