
ಮಂಗಳೂರು: ಹೆಬ್ಬಾವು ಮರಿಯ ಅಕ್ರಮ ವ್ಯಾಪಾರ – ಅಪ್ರಾಪ್ತ ಸೇರಿ ನಾಲ್ವರು ಯುವಕರು ಬಂಧನ
ಮಂಗಳೂರು ನಗರದಲ್ಲಿ ಹೆಬ್ಬಾವು ಮರಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬನು ಅಪ್ರಾಪ್ತನಾಗಿದ್ದು, ಮಂಗಳೂರು ನಗರದಲ್ಲಿ ಹಲವು ಹೋಟೆಲ್ ಕೊಠಡಿಗಳನ್ನು ಬಳಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.
ಬಂಧಿತರು – ಮಂಗಳೂರಿನ ಬಡಗ ಉಳಿಪಾಡಿಯ ನಿವಾಸಿ ವಿಶಾಲ್ ಎಚ್. ಶೆಟ್ಟಿ (18), ಇದೇ ಪ್ರದೇಶದ ಪ್ರಥಮ ಪಿಯುಸಿ ಓದುತ್ತಿರುವ 16 ವರ್ಷದ ಮುಸ್ಲಿಂ ವಿದ್ಯಾರ್ಥಿ, ಸ್ಟೇಟ್ ಬ್ಯಾಂಕ್ ಬಳಿ ಇರುವ ಪೆಟ್ ಝೋನ್ ಅಂಗಡಿಯ ಮಾಲೀಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35) ಹಾಗೂ ಅಂಗಡಿಯ ಸಿಬಂದಿ ಮಹಮ್ಮದ್ ಮುಸ್ತಫ (22) ಎಂದು ಗುರುತಿಸಲಾಗಿದೆ.
ಅಕ್ರಮ ಹೆಬ್ಬಾವು ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮಂಗಳೂರು ಅರಣ್ಯ ವಲಯಾಧಿಕಾರಿ ರಾಜೇಶ್ ಬಡಿಗಾರ್ ನೇತೃತ್ವದ ತಂಡ, ಖರೀದಿದಾರರ ಸೋಗಿನಲ್ಲಿ ಮೊದಲು ಇಬ್ಬರನ್ನು ಆರೋಪಿಗಳ ಬಳಿ ಕಳುಹಿಸಿತು. ಆರೋಪಿಗಳಿಂದ ಮಾಹಿತಿ ಪಡೆದು, ಕದ್ರಿಯ ಅಶ್ವತ್ಥ ಕಟ್ಟೆ ಬಳಿ ವಿಶಾಲ್ ಶೆಟ್ಟಿಯನ್ನು ಸಂಪರ್ಕಿಸಿದರು.
ಅವನೊಂದಿಗೆ ಮಾತುಕತೆ ನಡೆಸಿದ ಅರಣ್ಯಾಧಿಕಾರಿಗಳು ಹೆಬ್ಬಾವು ಮರಿಯ ಬಗ್ಗೆ ವಿಚಾರಿಸಿದರು. ಹಾವು ತೋರಿಸಿದ ಯುವಕ ಅದಕ್ಕಾಗಿ ₹45,000 ಬೇಡಿಕೆ ಇಟ್ಟಿದ್ದಾನೆ. ವ್ಯವಹಾರ ಒಪ್ಪಿಗೆ ಹಂತದಲ್ಲಿದ್ದಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.