
ಮಂಗಳೂರು: ಬಜ್ಪೆ ಸಮೀಪದ ಕಿನ್ನಿಕಂಬಳ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಫಾಜಿಲ್ ಹತ್ಯೆ ಪ್ರಕರಣದ ಆರೋಪಿ ಸುಹಾಸ್ ಶೆಟ್ಟಿಯ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸುಹಾಸ್‌ರನ್ನು ಬಜ್ಪೆ ಪೊಲೀಸರು ಎಜೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೀನು ಸಾಗಿಸುತ್ತಿದ್ದ ಪಿಕ್ ಅಪ್ ವಾಹನದಲ್ಲಿ ಬಂದ ದುಷ್ಕರ್ಮಿಗಳು, ಸುಹಾಸ್ ಶೆಟ್ಟಿಯ ಇನ್ನೋವಾ ಕಾರನ್ನು ಕಿನ್ನಿಕಂಬಳ ಬಳಿ ತಡೆದು ನಿಲ್ಲಿಸಿದ್ದಾರೆ. ಆಗ ಆತನ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೇರ್ ಸಲೂನ್‌ಗೆ ನುಗ್ಗಿದೆ. ಕಾರಿನಿಂದ ಇಳಿಯುತ್ತಿದ್ದ ವೇಳೆ 4 ರಿಂದ 5 ಮಂದಿಯ ಗುಂಪು ತಲವಾರು ಸಹಿತ ಆತನ ಮೇಲೆ ದಾಳಿ ನಡೆಸಿ ತಲೆಗೆ, ಕೈ, ಕಾಲಿಗೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಘಟನೆಯು ಮಂಗಳೂರಿನಲ್ಲಿ ಮತ್ತೆ ಏಕಾಏಕಿ ಭದ್ರತಾ ಚಿಂತನೆಗೆ ಕಾರಣವಾಗಿದೆ.