
ಥೈಲ್ಯಾಂಡ್ ಭೂಕಂಪದಲ್ಲಿ ಸಾವಿನ ಸಂಖ್ಯೆ 144ಕ್ಕೆ ಏರಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಸಾವಿನ ಸಂಖ್ಯೆ 1000 ಗಡಿ ದಾಟುವ ಸಾಧ್ಯತೆ ಇದೆ.
ಶುಕ್ರವಾರ, ಮ್ಯಾನ್ಮಾರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿವೆ. ಭೂಕಂಪದ ಕೇಂದ್ರಬಿಂದುವು ಮಧ್ಯ ಮ್ಯಾನ್ಮಾರ್‌ನ ಮೋನಿವಾ ನಗರದಿಂದ ಸುಮಾರು 50 ಕಿಲೋಮೀಟರ್ ಪೂರ್ವಕ್ಕೆ ಇದೆ ಎಂದು ವರದಿಯಾಗಿದೆ.
ಮಂಡಲೇಯಲ್ಲಿರುವ ಐಕಾನಿಕ್ ಅವಾ ಸೇತುವೆ ಭೂಕಂಪದಿಂದ ಕುಸಿದು ಹೋಗಿದ್ದು, ಮಸೀದಿಯೂ ಭಾಗಶಃ ಧ್ವಂಸಗೊಂಡಿದೆ. ಈ ಘಟನೆಗಳಲ್ಲಿ ಕನಿಷ್ಠ ಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಬಿರುಕು ಬಿಟ್ಟಿರುವ ಕಾರಣ, ಒಂದು ಆಸ್ಪತ್ರೆ ತಮ್ಮ ಸ್ಥಳವನ್ನು “ಸಾಮೂಹಿಕ ಸಾವುನೋವು ಪ್ರದೇಶ” ಎಂದು ಘೋಷಿಸಿದೆ.
ಥೈಲ್ಯಾಂಡ್‌ನ ಹಲವೆಡೆ ಭೂಕಂಪದ ಪ್ರಭಾವ ಕಂಡುಬಂದಿದೆ. ಕಂಪನದ ಪರಿಣಾಮವಾಗಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಗಗನಚುಂಬಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಅನೇಕರನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಕಟ್ಟಡ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ.
ಈ ನಡುವೆಯೇ, ಭಾರತ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಭೂಕಂಪ ಪೀಡಿತ ಪ್ರದೇಶಗಳಿಗೆ ನೆರವು ನೀಡಲು ಮುಂದಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.