
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸಮುದ್ರದ ಅಳಿವೆ ಪ್ರದೇಶದಲ್ಲಿ ಒಂದು ದೋಣಿ ಮಗುಚಿದ್ದರಿಂದ ನಾಲ್ವರು ಸಮುದ್ರದಲ್ಲಿ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ಘಟನೆಯಲ್ಲಿ ಇಬ್ಬರನ್ನು ರಕ್ಷಿಸಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ.
ಘಟನೆಯ ಸ್ಥಳಕ್ಕೆ ಕರಾವಳಿ ಕಾವಲು ಪಡೆ, ಪೋಲಿಸ್ ತಂಡಗಳು ಮತ್ತು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ತಲುಪಿದ್ದಾರೆ. ಈ ಸುದ್ದಿ ತಿಳಿದ ನಂತರ ಸಾವಿರಾರು ಜನರು ಘಟನಾಸ್ಥಳದತ್ತ ಧಾವಿಸಿದ್ದಾರೆ.
ಮೀನುಗಾರಿಕೆಗೆ ಹೊರಟಿದ್ದ ಆರು ಜನರ ದೋಣಿ ಪ್ರಬಲ ಅಲೆಗಳ ಘಾಸಿಗೆ ಸಿಲುಕಿ ಮಗುಚಿತು. ಇದರ ಪರಿಣಾಮವಾಗಿ ನಾಲ್ವರು ಜನರು ಸಮುದ್ರದ ಅಲೆಗಳಿಗೆ ಸಿಲುಕಿ ಕಾಣೆಯಾಗಿದ್ದಾರೆ.
ಭಟ್ಕಳದ ಮನೋಹರ ಈರಯ್ಯ ಮೊಗೇರ (31) ಮತ್ತು ಬೆಳೆ ಬಂದರ್ನ ಜಾಲಿ ರಾಮ ಮಾಸ್ತಿ ಖಾರ್ವಿ (43) ಅವರನ್ನು ರಕ್ಷಿಸಲಾಗಿದೆ.
ಜಾಲಿ ಕೋಡಿಯ ರಾಮಕೃಷ್ಣ ಮಂಜು ಮೊಗೇರ (40), ಅಳ್ವೆಕೋಡಿಯ ಸತೀಶ್ ತಿಮ್ಮಪ್ಪ ಮೊಗೇರ (26), ಗಣೇಶ್ ಮಂಜುನಾಥ ಮೊಗೇರ (27) ಮತ್ತು ಅಳ್ವೆಕೋಡಿ ಮುಗ್ರಿ ಮನೆಯ ಕನ್ನಡ ಶಾಲೆಯ ನಿಶ್ಚಿತ ಮೊಗೇರ (30) ಇವರು ಸಮುದ್ರದಲ್ಲಿ ಕಾಣೆಯಾಗಿದ್ದು, ಅವರನ್ನು ಹುಡುಕುವ ಕಾರ್ಯಾಚರಣೆ ನಡೆಸಲಾಗುತ್ತಿದೆ.