
ಬೈಂದೂರು: ನಿರಂತರ ಮಳೆಯಿಂದಾಗಿ ನೆರೆ ಭೀತಿ – ಜನಜೀವನ ಅಸ್ತವ್ಯಸ್ತ
ಬೈಂದೂರು ಮತ್ತು ಕೊಡಗುಳಘಾಟಿ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಅನಿಯಮಿತವಾಗಿ ಭಾರೀ ಮಳೆಯಾಗುತ್ತಿದ್ದು, ಕೊಲ್ಲೂರು ಘಾಟಿಯಿಂದ ಹರಿದು ಬರುವ ಸೌಪರ್ಣಿಕಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ ಮತ್ತು ಮರವಂತೆ ಭಾಗಗಳಲ್ಲಿ ನದಿಯ ನೀರು ಮನೆಗಳಿಗೆ ನುಗ್ಗಿದ್ದು, ಸ್ಥಳೀಯರ ಜೀವನದಲ್ಲಿ ಗಂಭೀರ ಅಸ್ತವ್ಯಸ್ತತೆ ಉಂಟಾಗಿದೆ.
ಇದೇ ವೇಳೆ ಕರಾವಳಿ ಭಾಗದಲ್ಲಿ ಕಡಲ ಕೊರೆತದ ಮುನ್ಸೂಚನೆಯು ಕೂಡ ಸಿಕ್ಕಿದ್ದು, ತ್ರಾಸಿ – ಮರವಂತೆ ಬೀಚ್ ಪ್ರದೇಶದಲ್ಲಿ ಪ್ರವಾಸಿಗರ ಭದ್ರತೆಗಾಗಿ ಸಮುದ್ರದ ನೀರಿಗೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ನೇತೃತ್ವದಲ್ಲಿ ಅಳವಡಿಸಲಾಗಿದೆ.

ನಾವುಂದ ಮತ್ತು ನಾಡ ಕುದ್ರು ಪ್ರದೇಶಗಳಲ್ಲೂ ನದಿಯ ನೀರು ಚಿಮ್ಮಿ ನುಗ್ಗಿರುವ ಪರಿಣಾಮವಾಗಿ, ಸ್ಥಳೀಯರು ಆತಂಕದ ನಡುವೆ ದಿನಕಳೆಯುವ ಸ್ಥಿತಿಯಲ್ಲಿದ್ದಾರೆ. ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿರುವ ಕಾರಣ, ಇಲ್ಲಿ ದೋಣಿಯ ಮೂಲಕ ಸಂಚರಿಸುವ ಜನರಿಗೆ ಈಗ ದೋಣಿಯಲ್ಲಿ ಸಂಚಾರ ಕೂಡ ಕಷ್ಟಕರವಾಗಿದೆ.

ಪ್ರತಿ ವರ್ಷ ನೆರೆ ಹಿನ್ನಲೆಯಲ್ಲಿ ಮಣ್ಣು ಕೊಚ್ಚಿ ಹೋಗುತ್ತಿದ್ದು, ನದಿ ದಡಗಳಲ್ಲಿ ತಡೆಗೋಡೆಗಳಿಲ್ಲದಿರುವುದರಿಂದ ನದಿ ಕೊರೆತ ಹೆಚ್ಚು ಸಮಸ್ಯೆಯಾಗಿ ತಲೆದೋರಿದೆ. ಇತ್ತೀಚೆಗೆ ಸ್ಥಳವನ್ನು ಡ್ರೋನ್ ಮೂಲಕ ವೀಕ್ಷಣೆ ಮಾಡಲಾಗಿದ್ದು, ಈಗ ತಾತ್ಕಾಲಿಕವಾಗಿ ನೀರಿನ ಮಟ್ಟ ಸ್ವಲ್ಪ ಇಳಿಮುಖವಾಗಿದೆ. ಆದರೆ ಘಾಟಿ ಪ್ರದೇಶದಲ್ಲಿ ಮಳೆ ಮುಂದುವರೆದರೆ, ಮತ್ತೆ ನೆರೆ ಭೀತಿ ಎದುರಾಗುವ ಸಾಧ್ಯತೆ ಹೆಚ್ಚಿದೆ.