
ಬೆಂಗಳೂರು: ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಈ ಬೆಳವಣಿಗೆ ಪೋಷಕರಲ್ಲಿ ಹಾಗೂ ಸಮುದಾಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯದಿಂದಲೇ ಕಾಣಿಸುತ್ತಿದ್ದ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ತಜ್ಞರಲ್ಲೂ ಕಳವಳವನ್ನುಂಟು ಮಾಡಿದೆ.
ಇಂತಹದ್ದೇ ಮತ್ತೊಂದು ದುರ್ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ಸಂಭವಿಸಿದೆ. 19 ವರ್ಷದ ನಿಶಾಂತ್ ಎಂಬ ಯುವಕ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.
ನಿಶಾಂತ್, ಹಾಸನ ಜಿಲ್ಲೆಯ ಹೊಳೆನರಸೀಪುರದ ನಿವಾಸಿಯಾಗಿದ್ದು, ಸುಮಾರು 15 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಜೆಪಿ ನಗರದ ಪಿಜಿಯಲ್ಲಿ ವಾಸವಿದ್ದ ಅವರು ಡಿಪ್ಲೋಮಾ ಪೂರೈಸಿ ಅಪ್ರೆಂಟಿಸ್ ಹುದ್ದೆಗೆ ಸೇರಿದ್ದರು. ಜೊತೆಗೆ ಪುಡ್ ಡೆಲಿವರಿ ಕೆಲಸವನ್ನೂ ಮಾಡುತ್ತಿದ್ದರು.
ಘಟನೆಯ ದಿನ ರಾತ್ರಿ ಸ್ನೇಹಿತರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಎದೆನೋವಿನ ಬಗ್ಗೆ ತಿಳಿಸಿದ್ದಾರೆ. ಬಳಿಕ ಮಲಗಿದ್ದ ನಿಶಾಂತ್, ಮುಂಜಾನೆ ಎದ್ದಿಲ್ಲ ಎಂಬುದನ್ನು ಗಮನಿಸಿದ ಸ್ನೇಹಿತರು, ಪರಿಶೀಲಿಸಿದಾಗ ಅವರು ಇನ್ನಿಲ್ಲ ಎಂಬುದು ಸ್ಪಷ್ಟವಾಯಿತು. ಈ ಕುರಿತು ಮಾಹಿತಿ ಪಡೆದ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ನಿಶಾಂತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಜೆಪಿ ನಗರ ಠಾಣೆಯಲ್ಲಿ ಅಪಮೃತ್ಯು ಪ್ರಕರಣ ದಾಖಲಾಗಿದೆ.
ಈ ದುರ್ಘಟನೆ ನಿಶಾಂತ್ ಅವರ ಕುಟುಂಬ ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿಸಿದ್ದು, ಯುವಜನದಲ್ಲಿ ಹೃದಯಾಘಾತದ ಪ್ರಮಾಣ ಏರಿಕೆಯಾಗುತ್ತಿರುವುದು ಆರೋಗ್ಯ ತಜ್ಞರನ್ನೂ ಚಿಂತೆಗೆ ಒಳಪಡಿಸಿದೆ. ತೀವ್ರ ಒತ್ತಡ, ದುಡ್ಡಿನಿಗಾಗಿ ಹೆಚ್ಚುತ್ತಿರುವ ಪೈಪೋಟಿ, ಅಜಾಗರೂಕ ಜೀವನಶೈಲಿ ಹಾಗೂ ನಿಯಮಿತ ತಪಾಸಣೆಯ ಕೊರತೆ ಈ ಪ್ರಕರಣಗಳಿಗೆ ಕಾರಣವಾಗಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.