
ಬೆಂಗಳೂರು: ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಮತ್ತು ಬಿಜೆಪಿ ಮುಖಂಡರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಪ್ರಕರಣಕ್ಕೆ ಹಾಜರಾಗಲು ತೆರಳಿದ್ದ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿಯನ್ನು ಅಪಹರಿಸಿ, ಕತ್ತು ಸೀಳಿ ಕ್ರೂರವಾಗಿ ಕೊಂದ ಘಟನೆ ನಡೆದಿದೆ.
ಹತ್ಯೆಗೊಳಗಾದ ವೀರಸ್ವಾಮಿ ಮತ್ತು ಪ್ರಶಾಂತ್ ರೆಡ್ಡಿ ಇಬ್ಬರೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಆಪ್ತರಾಗಿದ್ದು, ವೀರಸ್ವಾಮಿ ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರು. ಪ್ರಶಾಂತ್ ರೆಡ್ಡಿ ಮಹದೇವಪುರ ಬಿಜೆಪಿ ಯುವ ಮೋರ್ಚದ ಅಧ್ಯಕ್ಷರಾಗಿದ್ದರು.
ಬೆಂಗಳೂರಿನಲ್ಲಿ ಇವರು ಮಾರ್ವೆಲ್ ಬಿಲ್ಡರ್ಸ್‌ನ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ, ಆಂಧ್ರದಲ್ಲಿ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿಯವರ ಮೇಲೂ ಅನುರೂಪ ಪ್ರಕರಣ ದಾಖಲಾಗಿತ್ತು.
ನಿನ್ನೆ ಅವರು ಕೋರ್ಟ್ ಹಾಜರಿಗಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೋರ್ಟ್ ಎದುರು ಬಂದಿದ್ದಾಗ, ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ರಾಜಿ ಮಾತುಕತೆಗಾಗಿ ಕರೆಸಿಕೊಂಡು, ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಅವರನ್ನು ಅಪಹರಿಸಿದರು. ಬಳಿಕ ಇಬ್ಬರನ್ನೂ ಕತ್ತು ಸೀಳಿ ಕ್ರೂರವಾಗಿ ಹತ್ಯೆ ಮಾಡಿ ಹೆದ್ದಾರಿಯಲ್ಲೇ ಶವಗಳನ್ನು ಎಸೆದು ಹೋಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆಸುತ್ತಿದ್ದಾರೆ.