
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಭೀತಿಯು ಆರಂಭವಾಗಿದೆ. ಬೇಸಿಗೆಯ ಮಧ್ಯೆ ಮಳೆಯ ಆರ್ಭಟದಿಂದ ಈ ರೋಗಗಳ ಹರಡುವಿಕೆ ಸಾಧ್ಯವಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ನಗರದಲ್ಲಿ 910ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಒಂದೇ ವಾರದಲ್ಲಿ 75ಕ್ಕೂ ಹೆಚ್ಚು ಹೊಸ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಡೆಂಗ್ಯೂ ಜೊತೆಗೆ ಚಿಕನ್ ಗುನ್ಯಾ ಸೋಂಕು ಕೂಡಾ ಹೆಚ್ಚಾಗುತ್ತಿದೆ. ಕಳೆದ ವಾರದಲ್ಲಿ ಮಾತ್ರ 24 ಚಿಕನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಜನವರಿಯಿಂದ ಇದುವರೆಗೆ 260ಕ್ಕೂ ಹೆಚ್ಚು ಚಿಕನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಯೋಜನಾ ವಿಭಾಗದ ನಿರ್ದೇಶಕ ಅನ್ಸರ್ ಅಹ್ಮದ್ ತಿಳಿಸಿದ್ದಾರೆ.
ಜ್ವರದಿಂದ ಬಳಲುತ್ತಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳತ್ತ ಓಡುತ್ತಿರುವ ದೃಶ್ಯವೂ ಕಂಡುಬರುತ್ತಿದೆ. ತಪಾಸಣೆಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಲಕ್ಷಣಗಳು ಕಂಡುಬರುತ್ತಿವೆ. ವೈದ್ಯರು, ವೈರಲ್ ಜ್ವರ ಮತ್ತು ಚಿಕನ್ ಗುನ್ಯಾ ಹರಡುವಿಕೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಎಚ್ಚರಿಕೆ ನೀಡಿದ್ದಾರೆ.