
ನೊಯ್ಡಾದ ಸೆಕ್ಟರ್ 105 ರ ಐಷಾರಾಮಿ ಬಂಗಲೆಯಲ್ಲಿ ಬೃಹತ್ ಪೋರ್ನ್ ರಾಕೆಟ್ ನಡೆಸುತ್ತಿದ್ದ ದಂಪತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಈ ಜಾಲದ ಮುಖ್ಯಸ್ಥರು ಉಜ್ವಲ್ ಕಿಶೋರ್ ಮತ್ತು ನೀಲು ಶ್ರೀವಾಸ್ತವ್ ಎಂಬುವರು. ಮಾಡೆಲಿಂಗ್ ಅವಕಾಶಗಳ ಆಮಿಷವೊಡ್ಡಿ ನೂರಾರು ಮಹಿಳೆಯರನ್ನು ವಂಚಿಸಿ, ಅವರ ಪೋರ್ನ್ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ವಿಡಿಯೋಗಳನ್ನು ಸೈಪ್ರಸ್ ಮೂಲದ ಟೆಕ್ನಿಯಸ್ ಲಿಮಿಟೆಡ್ ಕಂಪನಿಗೆ ಮಾರಾಟ ಮಾಡಲಾಗುತ್ತಿತ್ತು, ಇದು ಸ್ಟ್ರಿಪ್‌ಚಾಟ್ ಮತ್ತು ಎಕ್ಸ್‌ಹ್ಯಾಮ್‌ಸ್ಟರ್‌ನಂತಹ ಪೋರ್ನ್ ವೆಬ್‌ಸೈಟ್‌ಗಳನ್ನು ನಡೆಸುತ್ತದೆ. ಕಳೆದ ಐದು ವರ್ಷಗಳಿಂದ ಈ ಜಾಲವು ಕಾರ್ಯನಿರ್ವಹಿಸುತ್ತಿದ್ದರೆಂದು ಮಾಧ್ಯಮ ವರದಿಗಳು ತಿಳಿಸಿವೆ. ದಾಳಿಯ ವೇಳೆ, ಮೂವರು ಮಾಡೆಲ್‌ಗಳು ಪೋರ್ನ್ ವಿಡಿಯೋ ಚಿತ್ರೀಕರಣದಲ್ಲಿದ್ದನ್ನು ಪತ್ತೆ ಮಾಡಲಾಗಿದೆ.
ಇಡಿ ಮೂಲಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ 400 ಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ. ಮಹಿಳೆಯರನ್ನು ನೇಮಿಸಲು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಸಲಾಗುತ್ತಿತ್ತು. ಚಿತ್ರೀಕರಿಸಿದ ವಿಡಿಯೋಗಳನ್ನು “ಹಾಫ್ ಫೇಸ್ ಶೋ”, “ಫುಲ್ ಫೇಸ್ ಶೋ” ಮತ್ತು “ನ್ಯೂಡ್” ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಉಜ್ವಲ್ ಕಿಶೋರ್ ರಷ್ಯಾದ ಸೆಕ್ಸ್ ಸಿಂಡಿಕೇಟ್‌ನಲ್ಲಿ ಭಾಗಿಯಾಗಿದ್ದನು ಹಾಗೂ ಈ ಜಾಲವನ್ನು ವಿಸ್ತರಿಸಲು ಅಲ್ಲಿಂದ ಸಹಾಯ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ.
ಸಬ್‌ಡಿಜಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಈ ದಂಪತಿಗಳು ತಮ್ಮ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಜಾಹೀರಾತು, ಮಾರುಕಟ್ಟೆ ಸಂಶೋಧನೆ ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ನೆಪದಲ್ಲಿ ವಿದೇಶಿ ಹಣಕಾಸು ವಹಿವಾಟು ನಡೆಸಲಾಗುತ್ತಿತ್ತು. ಆದರೆ, ಈ ಹಣವನ್ನು ಎಕ್ಸ್‌ಹ್ಯಾಮ್‌ಸ್ಟರ್‌ನಲ್ಲಿ ಪ್ರಸಾರವಾದ ವಯಸ್ಕರ ವಿಷಯದಿಂದ ಗಳಿಸಲಾಗಿತ್ತೆಂದು ಇಡಿ ಹೇಳಿದೆ. ದಾಳಿಯ ವೇಳೆ, ವಯಸ್ಕರ ವಿಷಯವನ್ನು ಸ್ಟ್ರೀಮ್ ಮಾಡಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಸ್ಟುಡಿಯೋ ಪತ್ತೆಯಾಗಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾಡೆಲ್‌ಗಳನ್ನು ನೇಮಿಸಲಾಗುತ್ತಿದ್ದರೆಂದು ಏಜೆನ್ಸಿ ಹೇಳಿದೆ. ಕಂಪನಿಯ ಮತ್ತು ನಿರ್ದೇಶಕರ ಬ್ಯಾಂಕ್ ಖಾತೆಗಳಲ್ಲಿ 15.6 ಕೋಟಿ ರೂಪಾಯಿಗಿಂತ ಹೆಚ್ಚಿನ ಕಾನೂನುಬಾಹಿರ ಹಣಕಾಸು ವಹಿವಾಟು ಕಂಡುಬಂದಿದೆ. ನೆದರ್‌ಲ್ಯಾಂಡ್‌ನಲ್ಲಿ ಕೂಡಾ ಬಹಿರಂಗಪಡಿಸದ ಬ್ಯಾಂಕ್ ಖಾತೆ ಪತ್ತೆಯಾಗಿದ್ದು, ಅದರ ಮೂಲಕ ಟೆಕ್ನಿಯಸ್ ಲಿಮಿಟೆಡ್‌ನಿಂದ ಸುಮಾರು 7 ಕೋಟಿ ರೂಪಾಯಿ ವರ್ಗಾವಣೆಯಾಗಿದೆ. ಈ ದಂಪತಿಗಳು ಸಂಪಾದನೆಯ 75% ಹಣವನ್ನು ತಮ್ಮವಶಕ್ಕೆ ಇಟ್ಟುಕೊಂಡು, ಮಾಡೆಲ್‌ಗಳಿಗೆ ಕೇವಲ ಒಂದು ಭಾಗವನ್ನು ಮಾತ್ರ ನೀಡುತ್ತಿದ್ದರು. ದಾಳಿಯ ಸಂದರ್ಭದಲ್ಲಿ 8 ಲಕ್ಷ ರೂಪಾಯಿ ನಗದು ಮತ್ತು ಅಪರಾಧಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆಯುತ್ತಿದೆ.