
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ (BJP) ಬಣ ಬಡಿದಾಟ ಈಗಾಗಲೇ ಹೈಕಮಾಂಡ್ (BJP High Command) ಅಂಗಳ ತಲುಪಿತ್ತು. ಅಲ್ಲದೇ ಈ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೂ ಬಂದಿದ್ದು, ಹಲವು ಬಾರಿ ಚರ್ಚೆಗಳನ್ನೂ ನಡೆಸಿದ್ದರು. ಅಲ್ಲದೇ ಬಿಜೆಪಿ ಶಾಸಕ ಯತ್ನಾಳ್ ಸದಾ ಪಕ್ಷದ ಬಗ್ಗೆ ಆಗಲಿ, ನಾಯಕರ ಬಗ್ಗೆ ಆರೋಪಗಳನ್ನು ಮಾಡುತ್ತಲೇ ಇದ್ದರು. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದರು. ಇದೀಗ ಬಸನಗೌಡ ಪಾಟೀಲ್ ಅವರನ್ನು ಬಿಜೆಪಿ ಕೇಂದ್ರ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.
ವಿಜಯಪುರ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಧಿಕಾರ ಹಂಚಿಕೆ ಬಗ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಬಹಿರಂಗವಾಗಿಯೇ ಆರೋಪಗಳನ್ನು ಮಾಡುತ್ತಿದರು. ಕಳೆದ ಕೆಲವು ತಿಂಗಳಿಂದ ಬಿಜೆಪಿ ಬಣ ಬಡಿದಾಟ ನಡೆಯುತ್ತಲೇ ಇತ್ತು. ಇದೀಗ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡುವ ಮೂಲಕ ಬಣ ಬಡಿದಾಟಕ್ಕೆ ಕೊನೆಗೂ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ.

ಯತ್ನಾಳ್, ವಿಜಯೇಂದ್ರ ಬಣದ ಶಾಸಕರಿಗೆ ನೋಟಿಸ್:
ನಿನ್ನೆಯಷ್ಟೇ (ಮಾ.25) ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡ ಹರಿಹರ ಶಾಸಕ ಬಿಪಿ ಹರೀಶ್‌ಗೆ ನೋಟಿಸ್ ನೀಡಲಾಗಿತ್ತು. ಅತ್ತ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡ ಮಾಜಿ ಶಾಸಕರಾದ ಎಂಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡುಗೆ ನೋಟಿಸ್ ನೀಡಲಾಗಿತ್ತು. ಇದೀಗ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದೆ.