
ಅಸ್ಸಾಂನಲ್ಲಿ ತಿಲಕ ತೆಗೆದುಹಾಕಿದ ಘಟನೆ: ಧಾರ್ಮಿಕ ಭಾವನೆಗಳಿಗೆ ಅವಮಾನ ಎಂಬ ಆರೋಪ
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಸಿರಾಜುಲಿಯ ಡಾನ್ ಬೋಸ್ಕೋ ಶಾಲೆಯಲ್ಲಿ ಹಿಂದೂ ಬಾಲಕಿಯ‘ತಿಲಕ’ ತೆಗೆದುಹಾಕಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೆಜಿ ವಿಭಾಗದಲ್ಲಿ ಓದುತ್ತಿದ್ದ ಬಾಲಕಿಯ ತಿಲಕವನ್ನು ಶಿಕ್ಷಕಿ ರಿನೀ ರೋಸ್ ಬಲವಂತವಾಗಿ ತೆಗೆದುಹಾಕಿದ್ದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಬಾಲಕಿ ತಕ್ಷಣ ಪೋಷಕರಿಗೆ ತಿಳಿಸಿದ್ದಾರೆ.
ಪೋಷಕರು ವಿಷಯವನ್ನು ಶಾಲಾ ಪ್ರಾಂಶುಪಾಲರಿಗೆ ತಿಳಿಸಿದ್ದು, ಇದೇ ರೀತಿ ಘಟನೆ ಮರುಕಳಿಸದಿರಲಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಮರುದಿನ ಮತ್ತೆ ಶಿಕ್ಷಕಿ ತಿಲಕ ತೆಗೆಸಿದ ಘಟನೆ ನಡೆದಿದೆ. ಇದರಿಂದ ಬಾಲಕಿ ತೀವ್ರ ಭಾವನಾತ್ಮಕ ಸಂಕಟ ಅನುಭವಿಸಿದ್ದಾಳೆ.
ಘಟನೆಯಿಂದ ಬೇಸತ್ತ ಬಾಲಕಿಯ ಚಿಕಪ್ಪ ಅವಧ್ ಕಿಶೋರ್ ವರ್ಮಾ ಧೇಕಿಯಾಜುಲು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, “ಈ ಕೃತ್ಯವು ನಮ್ಮ ಧಾರ್ಮಿಕ ಭಾವನೆಗಳಿಗೆ ಆಘಾತ ನೀಡಿದ್ದು, ಭಾರತೀಯ ಸಂವಿಧಾನದಲ್ಲಿ ಭದ್ರಪಡಿಸಿರುವ ಧರ್ಮಾಚರಣೆ ಹಾಗೂ ವ್ಯಕ್ತಿಕ ಹಕ್ಕುಗಳ ಉಲ್ಲಂಘನೆ. ಇದು ಧಾರ್ಮಿಕ ತಾರತಮ್ಯದ ಸ್ಪಷ್ಟ ಉದಾಹರಣೆ ಮತ್ತು ಹಿಂದೂ ನಂಬಿಕೆಯ ಅವಮಾನ” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ‘ಒಪಿಇಂಡಿಯಾ’ ಮಾಧ್ಯಮ ವರದಿ ಮಾಡಿದೆ.
ಈ ಘಟನೆ, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಸತ್ ಸದರ್‌ನ ಜೋಗೇಂದ್ರನಾಥ ಬಾಲಿಕಾ ವಿದ್ಯಾಮಂದಿರದಲ್ಲಿ ತುಳಸಿ ಮಾಲಾ ಧರಿಸಿದ್ದ ವಿದ್ಯಾರ್ಥಿಯೊಬ್ಬರಿಂದ ಅದು ತೆಗೆಸಿದ ಹಿಂದಿನ ಪ್ರಕರಣವನ್ನು ಸ್ಮರಿಸುತ್ತದೆ.