
ಬೆಳಗಾವಿ: ಕಿಟಕಿ ಪಕ್ಕದ ಸೀಟ್ ಗಾಗಿ ಯುವಕರ ನಡುವೆ ಗಲಾಟೆ – ಒಬ್ಬನಿಗೆ ಚಾಕು ಇರಿತ
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ, ಸಾರ್ವಜನಿಕ ಬಸ್‌ಗಳಲ್ಲಿ ಪುರುಷರಿಗೆ ಸೀಟ್ ಸಿಗುವುದು ಅಪರೂಪವಾಗಿದೆ. ಈ ಪರಿಸ್ಥಿತಿಯಲ್ಲೇ, ಬೆಳಗಾವಿಯಲ್ಲಿ ಕಿಟಕಿ ಪಕ್ಕದ ಸೀಟ್‌ಗಾಗಿ ಯುವಕರ ನಡುವೆ ಜಗಳವಾಗಿದ್ದು, ಓರ್ವ ಯುವಕನಿಗೆ ಚಾಕು ಇರಿಯಲಾಗಿದೆ.
ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕಿಟಕಿ ಪಕ್ಕದ ಆಸನದ ಕುರಿತು ನಡೆದ ವಿವಾದವು ಹಿಂಸೆಗೂದಿದ್ದು, ಮಜ್ಜು ಸನದಿ (20) ಎಂಬ ಯುವಕನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗ್ಯಾಂಗ್‌ನ ಸದಸ್ಯರು ಚಾಕು ಇರಿದು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಜ್ಜುವನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ಪಡೆದ ಡಿಸಿಪಿ ರೋಹನ್ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.