
ಬಂಟ್ವಾಳ: ಕಳೆದ ನಾಲ್ಕು ತಿಂಗಳಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖಾ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಖೀರಪ್ಪ (55) ಎಂಬವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅವರು ಬಾಡಿಗೆಗೆ ವಾಸಿಸುತ್ತಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈಯಕ್ತಿಕ ಹಾಗೂ ಹಣಕಾಸಿನ ಅಡಚಣೆಗಳನ್ನು ಎದುರಿಸುತ್ತಿದ್ದ ಅವರು, ಆತ್ಮಹತ್ಯೆಗೆ ಮೊದಲು ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಜುಲೈ 19ರ ರಾತ್ರಿ ಗಸ್ತು ಕರ್ತವ್ಯ ಪೂರೈಸಿದ ನಂತರ ಮನೆಗೆ ತೆರಳಿದ್ದರು.
ಇಂದು ಸಂಜೆ ಅವರ ಕರ್ತವ್ಯದ ವೇಳೆ ಅವರು ದೂರವಾಣಿ ಕರೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ, ಸಹೋದ್ಯೋಗಿ ಪೊಲೀಸ್ ಸಿಬ್ಬಂದಿ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಖೀರಪ್ಪ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು ಎಂದು ತಿಳಿದು ಬಂದಿದೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅನುಮಾನಾಸ್ಪದ ಮರಣ ಪ್ರಕರಣ (ಯುಡಿಆರ್) ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.