
ಪುತ್ತೂರು: ಪ್ರೀತಿಸಿದ ಯುವತಿಗೆ ಮದುವೆಯಾಗಲು ನಿರಾಕರಿಸಿದ ಯುವಕನ ಮೇಲೆ ದೂರು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಬಪ್ಪಳಿಗೆ ನಿವಾಸಿ, ಬಿಜೆಪಿ ಮುಖಂಡ ಹಾಗೂ ವಾಸ್ತುಶಿಲ್ಪಿ ಪಿ.ಜಿ. ಜಗನ್ನಿವಾಸ್ ರಾವ್ ಅವರ ಪುತ್ರ ಪಿ.ಜಿ. ಕೃಷ್ಣ ಜೆ. ರಾವ್ (21) ವಿರುದ್ಧ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಪ್ರೀತಿ ಸಂಬಂಧ ಬೆಳೆಸಿ, ಬಳಿಕ ದೈಹಿಕ ಸಂಪರ್ಕ ಸ್ಥಾಪಿಸಿ, ಯುವತಿಯನ್ನು ಗರ್ಭವತಿಯಾಗಿಸಲು ಕಾರಣನಾಗಿ, ನಂತರ ಮದುವೆಗೆ ನಿರಾಕರಿಸಿರುವ ಆರೋಪವಿದೆ.
ಯುವತಿಯ ದೂರಿನಂತೆ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದಡಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆ ಮತ್ತು ಆರೋಪಿ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಯುವತಿಯನ್ನು ಮನೆಗೆ ಕರೆಸಿ, ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿ ವಿಷಯವನ್ನು ಗುಪ್ತವಾಗಿಡಲು ಒತ್ತಾಯಿಸಿದ್ದ. ಬಳಿಕ ಜನವರಿ ತಿಂಗಳಲ್ಲಿಯೂ ಯುವತಿಯನ್ನು ಮತ್ತೆ ತನ್ನ ಮನೆಗೆ ಕರೆಯಿಸಿ ದೈಹಿಕ ಸಂಪರ್ಕ ಮುಂದುವರಿಸಿದ್ದ ಎನ್ನಲಾಗಿದೆ.
ಈ ಘಟನೆಗಳಿಂದಾಗಿ ಯುವತಿ ಗರ್ಭವತಿಯಾಗಿದ್ದು, ಬಳಿಕ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾರೆ. ಕುಟುಂಬದವರು ಎರಡೂ ಮನೆಯಲ್ಲಿ ಮಾತುಕತೆ ನಡೆಸಿದ್ದು, ಪ್ರಾರಂಭದಲ್ಲಿ ಆರೋಪಿ ಕುಟುಂಬ ಮದುವೆಗೆ ಒಪ್ಪಿಗೆಯನ್ನೂ ನೀಡಿದರಂತೆ. ಆದರೆ ಇದೀಗ ಯುವತಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದರೂ ಕೃಷ್ಣ ರಾವ್ ಮದುವೆಗೆ ನಿರಾಕರಿಸಿದ್ದಾನೆ.
ಈ ಕುರಿತು ಜೂನ್ 24ರಂದು ರಾತ್ರಿ ಯುವತಿ ಪುತ್ತೂರು ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಪ್ರಕರಣ ದಾಖಲಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಭಾ.ನ್ಯಾಯ.ಸಂ) ಸೆಕ್ಷನ್ 64(1) ಮತ್ತು 69 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.