
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನಿಯರಿಗೆ ನೀಡಲಾಗಿದ್ದ 14 ಪ್ರಕಾರದ ವೀಸಾಗಳನ್ನು ರದ್ದುಗೊಳಿಸಿದೆ. ಏಪ್ರಿಲ್ 27ರೊಳಗೆ ಪಾಕ್ ಪ್ರಜೆಗಳು ಭಾರತ ತೊರೆಯಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶುಕ್ರವಾರ ದೂರವಾಣಿ ಕರೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಯಾವ ಪಾಕಿಸ್ತಾನಿಯೂ ಗಡುವಿನ ನಂತರ ಭಾರತದಲ್ಲಿ ಉಳಿಯಬಾರದು. ಎಲ್ಲರನ್ನು ಕೂಡಲೇ ಪತ್ತೆಹಚ್ಚಿ ದೇಶದ ಹೊರಗೆ ಕಳುಹಿಸಿ,” ಎಂದು ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಗಳ ಸಹಕಾರದಿಂದ ಆಜ್ಞೆ ಜಾರಿಗೆ ಖಚಿತತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದಾರೆ.
ಪಾಕಿಸ್ತಾನದ ವಿರುದ್ಧದ ರಾಜತಾಂತ್ರಿಕ ಕ್ರಮದ ಭಾಗವಾಗಿ, ಪಾಕ್‌ನ ಹಿಂದೂ ಧರ್ಮೀಯರಿಗೆ ನೀಡಿರುವ ದೀರ್ಘಾವಧಿಯ ವೀಸಾವನ್ನು ಹೊರತುಪಡಿಸಿ ಉಳಿದ ಎಲ್ಲಾ ವೀಸಾಗಳನ್ನು – ಸಾರ್ಕ್ ವೀಸಾ ಸೇರಿದಂತೆ – ಏ.27ರಿಂದ ರದ್ದುಪಡಿಸಲಾಗಿದೆ. ಜೊತೆಗೆ, ಪಾಕ್ ಪ್ರಜೆಗಳು 48 ಗಂಟೆಗಳೊಳಗೆ ಭಾರತ ತೊರೆಯುವಂತೆ ಗಡುವು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ, ತಮ್ಮ ರಾಜ್ಯ ವ್ಯಾಪ್ತಿಯಲ್ಲಿ ಯಾರೂ ಪಾಕಿಸ್ತಾನಿಯರು ಉಳಿಯದಂತೆ ಎಚ್ಚರ ವಹಿಸಬೇಕು ಎಂದು ಅಮಿತ್ ಶಾ ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ.