
ಜನರಿಗೆ ನ್ಯಾಯ ಒದಗಿಸಬೇಕಾದ ಪೊಲೀಸಪ್ಪನೇ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಧರ್ಮಸ್ಥಳ ಸಬ್ ಇನ್‌ಸ್ಪೆಕ್ಟರ್ ಕಿಶೋರ್ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ.
2024ರಲ್ಲಿ ಮೂಡಿಗೆರೆ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಕಿಶೋರ್, ವರ್ಷಾ ಅವರನ್ನು ವಿವಾಹವಾಗಿದ್ದರು. ಮದುವೆಯ ವೇಳೆ, ವರದಕ್ಷಿಣೆಯಾಗಿ 10 ಲಕ್ಷ ನಗದು, 22 ಲಕ್ಷ ಮೌಲ್ಯದ ಕ್ರೇಟಾ ಕಾರು, 135 ಗ್ರಾಂ ಚಿನ್ನ ನೀಡಿ, ಪೋಷಕರು 900 ಗ್ರಾಂ ಚಿನ್ನದೊಂದಿಗೆ ಒಟ್ಟು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಸಿದ್ದರು.
ಇಷ್ಟಾದರೂ, ಮೂಡಿಗೆರೆಯಿಂದ ಬೇರೊಬ್ಬ ಸ್ಥಳಕ್ಕೆ ಬದಲಾವಣೆ ಮಾಡಿಸಿಕೊಳ್ಳಲು ಕಿಶೋರ್ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಈ ಹಣ ನೀಡಲು ವಿಫಲರಾದಾಗ, ಗಂಡ ಕಿಶೋರ್ ಮತ್ತು ಅವರ ಕುಟುಂಬದವರಾದ ಅತ್ತೆ, ಮಾವ, ಹಾಗೂ ಮೈದುನರು ವರ್ಷಾಳಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಶಾರೀರಿಕ ಮತ್ತು ಮಾನಸಿಕ ಹಿಂಸೆ ನೀಡಿದರೆಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ವರ್ಷಾಳನ್ನು ಮೊದಲಿಗೆ ಧರ್ಮಸ್ಥಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಈ ಘಟನೆಯ ನಂತರ, ವರ್ಷಾ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಿಶೋರ್ ವಿರುದ್ಧ ವರದಕ್ಷಿಣೆ ಕೇಸ್ (ಡೌರಿ ಪ್ರಕರಣ) ಹಾಗೂ ಬಿ ಎನ್ ಎಸ್ ಎಸ್ (ಲೈಂಗಿಕ ಹಾಗೂ ದೈಹಿಕ ಹಿಂಸೆ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.