August 3, 2025
Screenshot_20250721_1010562

ಪಡುಬಿದ್ರಿ: ಅಟೋ-ಬಸ್ ಡಿಕ್ಕಿ – ಮ್ಯಾಕಾನಿಕ್ ವ್ಯಕ್ತಿ ದುರ್ಮರಣ

ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಜಂಕ್ಷನ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮ್ಯಾಕಾನಿಕ್ ವ್ಯಕ್ತಿಯೊಬ್ಬ ದುರ್ಮರಣಕ್ಕೊಳಗಾಗಿದ್ದಾರೆ.

ಪಾದೆಬೆಟ್ಟು ನಿವಾಸಿಯಾದ ಮನೋಹರ್ ಟಿ. ಕೋಟ್ಯಾನ್ (45) ಎಂಬವರು, ಪಡುಬಿದ್ರಿಯಿಂದ ತನ್ನ ಗೆಳೆಯನನ್ನು ಬೇಂಗ್ರೆಯ ಮನೆಯವರೆಗೆ ಬಿಟ್ಟು ತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪಡುಬಿದ್ರಿ ಜಂಕ್ಷನ್ ಬಳಿ ಆಟೋ ತಿರುಗುತ್ತಿದ್ದಂತೆಯೇ ಉಡುಪಿಯಿಂದ ವೇಗವಾಗಿ ಬಂದ ಖಾಸಗಿ ಬೆಂಗಳೂರು ಬಸ್ ‘ಪ್ರಗತಿ’ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ, ಮನೋಹರ್ ಅವರ ತಲೆಗೆ ತೀವ್ರ ಗಾಯವಾಗಿ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಅವರೊಂದಿಗೆ ಪ್ರಯಾಣಿಸುತ್ತಿದ್ದ ಗೆಳೆಯ ಜಯ ಬೇಂಗ್ರೆ ಗಾಯಗೊಂಡಿದ್ದು, ಮುಕ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೋಹರ್ ಅವರು ನಂದಿಕೂರಿನ ಬಜಾಜ್ ಸರ್ವಿಸ್ ಸೆಂಟರ್‌ನಲ್ಲಿ ಮ್ಯಾಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ವಿವಾಹಿತರಾಗಿದ್ದರು. ಆದರೆ ಕೆಲವು ಕಾರಣಗಳಿಂದ ಪತ್ನಿ ಮತ್ತು ಅವರು ವಿಭಿನ್ನವಾಗಿ ವಾಸಿಸುತ್ತಿದ್ದರು. 14 ವರ್ಷ ಪ್ರಾಯದ ಮಗನೊಂದಿಗೆ ಮನೋಹರ್ ವಾಸಿಸುತ್ತಿದ್ದರು ಎನ್ನಲಾಗಿದೆ.

ಅಪಘಾತ ಸಂಭವಿಸುವ ದಿನ ಸಂಜೆ, ಅವರು ಪಡುಬಿದ್ರಿಯ ಬಂಟರ ಸಂಘದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರಲ್ಲದೆ, ಸಂಜೆ ಏಳು ಗಂಟೆಯವರೆಗೂ ಅಲ್ಲೇ ಇದ್ದರು ಎಂಬ ಮಾಹಿತಿ ಸಂಘಟನೆಯ ಪ್ರಮುಖರಿಂದ ಲಭಿಸಿದೆ.

ಪಡುಬಿದ್ರಿ ಜಂಕ್ಷನ್ ಅಪಾಯಕರ ಪ್ರದೇಶವ್ಯಾಗಿದ್ದು, ಈವರೆಗೆ ಅನೇಕ ಅಮಾಯಕರ ಪ್ರಾಣಹಾನಿಗೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ಇಲ್ಲಿ ಫ್ಲೈ ಓವರ್ ನಿರ್ಮಾಣದ ಯೋಜನೆ ಇದ್ದರೂ ಕೆಲವರ ವಿರೋಧದಿಂದ ಅದು ಸ್ಥಗಿತಗೊಂಡಿತ್ತು. ಇದೀಗ ಈ ದುರ್ಘಟನೆಯ ಬಳಿಕ ಸಾರ್ವಜನಿಕರು ಆ ವಿರೋಧಿಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೋಹರ್ ಅವರ ಶವವನ್ನು ಮಂಗಳೂರಿನ ಆಸ್ಪತ್ರೆಯಿಂದ ತಡರಾತ್ರಿ 12.30ರ ಸುಮಾರಿಗೆ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ತರಲಾಗಿದ್ದು, ಬೆಳಿಗ್ಗೆ 10 ಗಂಟೆಗೆ ಶವವನ್ನು ಆಂಬುಲೆನ್ಸ್ ಮೂಲಕ ಪಾದೆಬೆಟ್ಟು ಮನೆಗೆ ಕರೆದೊಯ್ಯಲಾಗುವುದು ಎಂದು ಸಂಘಟನೆಯ ಮೂಲಗಳು ತಿಳಿಸಿವೆ.

error: Content is protected !!