
ವಾಷಿಂಗ್ಟನ್: ನಾಸಾದಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 2,145 ಮಂದಿ ಅಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಈ ಪ್ರಮುಖ ಬಾಹ್ಯಾಕಾಶ ಸಂಸ್ಥೆ ಇದೀಗ ಅನುಭವದ ಕೊರತೆಯನ್ನು ಎದುರಿಸುತ್ತಿದೆ ಎಂದು ಪೊಲಿಟಿಕೊ ವರದಿ ಮಾಡಿದೆ.
GS-13ರಿಂದ GS-15 ಶ್ರೇಣಿವರೆಗಿನ ವ್ಯವಸ್ಥಾಪನಾ ಹಾಗೂ ತಾಂತ್ರಿಕ ನಿಪುಣರೊಳಗಿನ 875 ಮಂದಿ GS-15 ಮಟ್ಟದ ಹಿರಿಯ ಸಿಬ್ಬಂದಿ ಈ ಪಟ್ಟಿಯಲ್ಲಿ ಸೇರಿದ್ದಾರೆ. ನಾಸಾ ಕೈಗೊಂಡಿರುವ ಉದ್ಯೋಗ ಕಡಿತದ ವ್ಯಾಪಕ ಯೋಜನೆಯ ಭಾಗವಾಗಿ, ಒಟ್ಟೂ 2,694 ಮಂದಿ ಅವಧಿಪೂರ್ವ ನಿವೃತ್ತಿ, ಮುಷ್ಕರ ಅಥವಾ ವಿಳಂಬಿತ ರಾಜೀನಾಮೆ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರು ತಾಂತ್ರಿಕ ಪರಿಣತಿಯನ್ನು ಹೊಂದಿರುವವರು.
ನಾಸಾದ ಮಹತ್ವದ “ಸೈನ್ಸ್ ಮತ್ತು ಹ್ಯೂಮನ್ ಸ್ಪೇಸ್ ಫ್ಲೈಟ್” ಯೋಜನೆಯೊಳಗಿನ 1,818 ಮಂದಿ ನೌಕರರು ಈಗಾಗಲೇ ನಾಸಾ ತೊರೆದಿದ್ದಾರೆ. ಜೊತೆಗೆ ಐಟಿ ಹಾಗೂ ಹಣಕಾಸು ವಿಭಾಗದ ಹಲವರು ಕೂಡ ರಾಜೀನಾಮೆ ನೀಡಿದ್ದಾರೆ. “ನಾವು ನಮ್ಮ ಅತಿ ಮುಖ್ಯವಾದ ನಿರ್ವಹಣಾ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಪ್ಲಾನೆಟರಿ ಸೊಸೈಟಿಯ ಬಾಹ್ಯಾಕಾಶ ನೀತಿ ವಿಭಾಗದ ಮುಖ್ಯಸ್ಥ ಕ್ಯಾಸಿ ಡ್ರೀಯರ್ ಎಚ್ಚರಿಸಿದ್ದಾರೆ. ಉದ್ಯೋಗ ಕಡಿತದ ಈ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.
2026ರ ಶ್ವೇತಭವನದ ಬಜೆಟ್‌ನಲ್ಲಿ ನಾಸಾದ ಅನುದಾನವನ್ನು ಶೇಕಡಾ 25ರಷ್ಟು ಕಡಿತಗೊಳಿಸುವ ಪ್ರಸ್ತಾವವಿದೆ. ಇದರ ಭಾಗವಾಗಿ 5,000 ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಲಾಗಿದೆ. ಈ ಕಾರಣದಿಂದ ನಾಸಾ ತನ್ನ 1960ರ ದಶಕದ ಆರಂಭದ ಸ್ಥಿತಿಗಿಂತಲೂ ಚಿಕ್ಕಗಾಗುವ ಸಂಭವವಿದೆ.
ಈ ನಿರ್ಧಾರ ನಾಸಾದ ಎಲ್ಲಾ 10 ಪ್ರಾದೇಶಿಕ ಕೇಂದ್ರಗಳ ಮೇಲೂ ಪರಿಣಾಮ ಬೀರುತ್ತಿದ್ದು, ಗೋದಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಮಾತ್ರವೇ 607 ಉದ್ಯೋಗಿಗಳನ್ನು ಕಳೆದುಕೊಳ್ಳಲಿದೆ. ಜಾನ್ಸನ್ ಸ್ಪೇಸ್ ಸೆಂಟರ್ (366), ಕೆನಡಿ ಸ್ಪೇಸ್ ಸೆಂಟರ್ (311), ನಾಸಾ ಕೇಂದ್ರ ಕಚೇರಿ (307), ಲಾಂಗ್ಲೆ ರಿಸರ್ಚ್ ಸೆಂಟರ್ (281), ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ (279) ಮತ್ತು ಗ್ಲೆನ್ ರಿಸರ್ಚ್ ಸೆಂಟರ್ (191) ಕೂಡಾ ಗಣನೀಯ ಸಂಖ್ಯೆಯಲ್ಲಿ ನೌಕರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.