
ಧರ್ಮಸ್ಥಳ ಶವ ಹೂತು ಪ್ರಕರಣ: ಸಾಕ್ಷಿದಾರರು ಸ್ಥಳಕ್ಕೆ ಬಂದರೂ ಪೊಲೀಸರು ಗೈರುಹಾಜರ್!
ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಗಂಭೀರ ಹೇಳಿಕೆ ನೀಡಿದ್ದ ಸಾಕ್ಷಿದಾರರು ಬುಧವಾರ (ಜು.16) ಮಧ್ಯಾಹ್ನ ತಮ್ಮ ವಕೀಲರೊಂದಿಗೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಸ್ಥಳಕ್ಕೆ ಮಾಹಿತಿ ನೀಡಲು ಆಗಮಿಸಿದ್ದರು. ಆದರೆ, ಸ್ಥಳ ಮಹಜರಿಗಾಗಿ ಪೊಲೀಸರು ಆಗಮಿಸಿಲ್ಲ.
ಮಧ್ಯಾಹ್ನ ಸುಮಾರು 3 ಗಂಟೆಗೆ ಸ್ಥಳಕ್ಕೆ ಬಂದ ಸಾಕ್ಷಿದಾರ ಮತ್ತು ಅವರ ವಕೀಲರು, ಕಾರಿನೊಳಗೆಯೇ ಪ್ರಾಯೋಗಿಕವಾಗಿ ಒಂದು ಗಂಟೆ ಕಾಲ ನಿರೀಕ್ಷಿಸಿದರು. ಸುಮಾರು 4 ಗಂಟೆಗೆ ಅವರು ಸ್ಥಳದಿಂದ ಹಿಂತಿರುಗಿದರು. ಕಾರಿನಿಂದ ಇಳಿಯದೆ ಇದ್ದ ಅವರು ಅಲ್ಲಿಯವರೆಗೆ ಯಾವುದೇ ಪೊಲೀಸ್ ಅಧಿಕಾರಿಯ ಆಗಮನದ ನಿರೀಕ್ಷೆಯಲ್ಲಿ ಸಮಯ ಕಳೆಯಬೇಕಾಯಿತು ಎಂದು ತಿಳಿದು ಬಂದಿದೆ.
ಹೆಚ್ಚುವರಿ ಮಾಹಿತಿಯಂತೆ, ಈ ಘಟನೆ ಬಗ್ಗೆ ಬೆಲ್ತಂಗಡಿ ಗ್ರಾಮೀಣ ವೃತ್ತ ನಿರೀಕ್ಷಕರು ಮತ್ತು ಪಿ.ಎಸ್.ಐ. ಧರ್ಮಸ್ಥಳ ಠಾಣೆಯಲ್ಲಿ ಇತರ ಪ್ರಕರಣಗಳ ಪರಿಶೀಲನೆ ನಡೆಸುತ್ತಿದ್ದರು. ಆದರೆ ಸಾಕ್ಷಿದಾರರ ತಂಡ ಧರ್ಮಸ್ಥಳ ಠಾಣೆಗೆ ಭೇಟಿಯನ್ನೂ ನೀಡಲಿಲ್ಲ ಎಂದು ತಿಳಿದುಬಂದಿದೆ.
ಜುಲೈ 11ರಂದು ಸಾಕ್ಷಿದಾರರು ಬೆಳ್ತಂಗಡಿ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದು, ತಾವು ಹೂತು ಹಾಕಿದ್ದ ಶವವೊಂದನ್ನು ಹೊರತೆಗೆದು ಪೊಲೀಸರಿಗೆ ಹಸ್ತಾಂತರಿಸಿದ್ದರಲ್ಲದೆ, ಹೆಚ್ಚಿನ ಶವಗಳ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, “ಜು.16ರಂದು ಶವ ಹೊರತೆಗೆಯುವ ಸಂಬಂಧ ಯಾವುದೇ ಅಧಿಕೃತ ಪೊಲೀಸ್ ಕ್ರಮಗಳು ನಿಗದಿಯಾಗಿಲ್ಲ” ಎಂದು ಮಧ್ಯಾಹ್ನ ಸಮಯದಲ್ಲಿ ಸ್ಪಷ್ಟಪಡಿಸಿದ್ದರು.