August 5, 2025
Screenshot_20250723_1413252-640x350

ಮಂಗಳೂರು: ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ಸಂಭವಿಸಿದಂತಿರುವ ಸಾಮೂಹಿಕ ಸಮಾಧಿಗಳು, ನಾಪತ್ತೆಗಳ ಪ್ರಕರಣಗಳು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಮೇಲಿನ ಅಪರಾಧಗಳ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಮಂಗಳೂರಿಗೆ ಆಗಮಿಸಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ತಂಡದ ಪ್ರಮುಖರು ಇಂದು ಸಂಜೆ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಭೇಟಿಯಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದರ ಜೊತೆಗೆ, ಎಸ್‌ಐಟಿ ತಂಡ ಯಾವುದೇ ಕ್ಷಣದಲ್ಲಿ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬಹುದು ಎನ್ನಲಾಗಿದೆ.

ಈ ನಡುವೆ, ಎಸ್‌ಐಟಿ ತಂಡಕ್ಕೆ ರಾಜ್ಯ ಸರ್ಕಾರ 20 ಮಂದಿ ಉನ್ನತ ಹಾಗೂ ಅನುಭವಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಈ ಕುರಿತು ಆದೇಶ ಹೊರಡಿಸಿದ್ದಾರೆ. ನೇಮಕಗೊಂಡವರಲ್ಲಿ ಓರ್ವ ಎಸ್‌ಪಿ, ಇಬ್ಬರು ಡಿಎಸ್ಪಿ, ನಾಲ್ವರು ಇನ್‌ಸ್ಪೆಕ್ಟರ್‌ಗಳು, ಏಳು ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು, ಸಿಪಿಐ ಮತ್ತು ಎಎಸ್‌ಐ ಅಧಿಕಾರಿಗಳು ಸೇರಿದ್ದಾರೆ. ಈ ತಂಡದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕಠಿಣ ಅನುಭವದ ಅಧಿಕಾರಿಗಳು ಸೇರಿದ್ದಾರೆ.

ಎಸ್‌ಐಟಿ ಇಂದಿನಿಂದಲೇ ತನಿಖೆ ಆರಂಭಿಸಬಹುದಾದ ಹಿನ್ನೆಲೆ, ಸಂಬಂಧಿತ ದಾಖಲೆಗಳನ್ನು ಹಸ್ತಾಂತರಿಸಲು ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಗಳಲ್ಲಿ ಸಿದ್ಧತೆ ನಡೆಯುತ್ತಿದೆ.

ಸಾರ್ವಜನಿಕ ಹಾಗೂ ಪ್ರಗತಿಪರ ಸಂಘಟನೆಗಳಿಂದ ಆಗಿದ್ದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ, ಧರ್ಮಸ್ಥಳ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ದಾಖಲಾದ ಪ್ರಕರಣಗಳ ಪ್ರಾಮಾಣಿಕ ತನಿಖೆಗಾಗಿ ರಾಜ್ಯ ಸರ್ಕಾರ ಶನಿವಾರ ಎಸ್‌ಐಟಿ ರಚಿಸಿ ಆದೇಶ ನೀಡಿದೆ.

ಇದಕ್ಕೂ ಮೊದಲು, ಧರ್ಮಸ್ಥಳದಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ, ಅಸಹಜ ಸಾವಿನ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಎಸ್‌ಐಟಿ ರಚನೆ ಅಗತ್ಯವೆಂದು ಮಹಿಳಾ ಆಯೋಗ ಮುಖ್ಯಮಂತ್ರಿಗೆ ಶಿಫಾರಸು ಮಾಡಿತ್ತು.

error: Content is protected !!