
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣದ ತನಿಖೆಗೆ ನೇಮಕಗೊಂಡಿರುವ ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಇಬ್ಬರು ಅಧಿಕಾರಿಗಳು ಹಿಂದೆ ಸರಿದಿರುವುದಾಗಿ ವರದಿಯಾಗಿದೆ.
ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿರುವ ಅಪರಾಧಗಳ ತನಿಖೆಗಾಗಿ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ಅವರನ್ನು ಸದಸ್ಯರಾಗಿ ರ್ಘಟಿಸಲಾಗಿತ್ತು.
ಇದೀಗ, ಸಿಎಆರ್ ಕೇಂದ್ರದ ಉಪ ಪೊಲೀಸ್ ಆಯುಕ್ತ ಸೌಮ್ಯಲತಾ ಅವರು ವೈಯಕ್ತಿಕ ಕಾರಣಗಳಿಂದಾಗಿ ತನಿಖಾ ತಂಡದಿಂದ ಹಿಂದೆ ಸರಿಯಲು ನಿರ್ಧರಿಸಿರುವ ಬಗ್ಗೆ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ನಡೆದ ತನಿಖಾ ರೂಪುರೇಷೆಯ ಸಭೆಯಲ್ಲಿಯೂ ಅವರು ಗೈರಾಗಿದ್ದರು. ಇದನ್ನು ಮನಗಂಡ ಪ್ರಣವ್ ಮೊಹಾಂತಿ ಅವರು ಸೌಮ್ಯಲತಾರ ಹೆಸರನ್ನು ತಂಡದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಇದಾದ ಜೊತೆಗೆ, ತನಿಖೆಗೆ ನೇಮಕಗೊಂಡ 20 ಮಂದಿಯ ಪೈಕಿ ಮತ್ತೊಬ್ಬ ಐಪಿಎಸ್ ಯೇತರ ಅಧಿಕಾರಿಯು ಸಹ ತಂಡದಿಂದ ನಿವೃತ್ತಿಯಾಗಲು ಪತ್ರ ಸಲ್ಲಿಸಿರುವುದಾಗಿ ಮೂಲಗಳು ತಿಳಿಸುತ್ತಿವೆ. ಈ ವಿಷಯವನ್ನು ಪ್ರಣವ್ ಮೊಹಾಂತಿ ಅವರು ಸರ್ಕಾರದ ಗಮನಕ್ಕೆ ತಂದಿದ್ದು, ಅವರನ್ನು ಬದಲಿಸುವ ನಿಟ್ಟಿನಲ್ಲಿ ಹೊಸ ಅಧಿಕಾರಿಗಳನ್ನು ನಿಯೋಜಿಸುವ ಸಾಧ್ಯತೆಯಿದೆ.