
ಧರ್ಮಸ್ಥಳದತ್ತ ಪಾದಯಾತ್ರೆ: ಸೌಜನ್ಯಗೆ ನ್ಯಾಯದ ಹೊಣೆಗಾರಿಕೆ ಕೇಳಿದ ಕಲಬುರಗಿಯ ಯುವಕರ ತಂಡಕ್ಕೆ ಸ್ಥಳೀಯರಿಂದ ತೀವ್ರ ಪ್ರತಿಕ್ರಿಯೆ
ಧರ್ಮಸ್ಥಳ ಇದೀಗ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಅನಾಮಿಕ ವ್ಯಕ್ತಿಯೊಬ್ಬನ ದೂರಿನ ಬೆನ್ನಲ್ಲೇ ಎಸ್‌ಐಟಿ ರಚನೆಯಾಗಿದೆ. ಈ ಹಿನ್ನೆಲೆಯಲ್ಲಿ, “ಸೌಜನ್ಯಗೆ ನ್ಯಾಯ” ಎಂಬ ಧ್ಯೇಯದೊಂದಿಗೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕು ರುದ್ರವಾಡಿ ಗ್ರಾಮದ ಶರಣಪ್ಪ ನೇತೃತ್ವದ ತಂಡವು ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ನಡೆಸಿತು.
ತಂಡವು ಧರ್ಮಸ್ಥಳದ ದ್ವಾರದವರೆಗೂ ಬಂದಾಗ, ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಸ್ಥಳೀಯರು ಮತ್ತು ಭಕ್ತರು ಇವರನ್ನು ತಡೆದರು. ಶರಣಪ್ಪನು ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ, ಜೊತೆಗೆ “ನಕಲಿ ದೇವಮಾನವ” ಎಂಬ ಶಬ್ದ ಬಳಸಿ ಹೆಗ್ಗಡೆಯವರನ್ನು ನಿಂದಿಸಿದ್ದಾನೆ ಎಂಬ ಆಕ್ರೋಶ ಸ್ಥಳೀಯರಲ್ಲಿ ಮೂಡಿತ್ತು.
ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯದಲ್ಲಿ ಧರ್ಮಸ್ಥಳ ಪೊಲೀಸರು ಹಸ್ತಕ್ಷೇಪ ಮಾಡಿ ಭಕ್ತರನ್ನು ಶಾಂತಗೊಳಿಸಿದರು.
ಕಲಬುರಗಿಯಿಂದ ಬಂದ ಯುವಕರು ಸ್ಪಷ್ಟಪಡಿಸಿದ್ದು:
“ನಾವು ಹೆಗ್ಗಡೆಯವರನ್ನು ನಕಲಿ ದೇವಮಾನವ ಎಂದಿಲ್ಲ. ಯಾವುದೇ ತಪ್ಪು ಮಾಡಿದವರ ವಿರುದ್ಧ ಧ್ವನಿ ಎತ್ತಿದ್ದೇವೆ. ನಾವು ಇಲ್ಲಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನಮನ ಮಾಡುವ ಹಾಗೂ ಸೌಜನ್ಯಗೆ ನ್ಯಾಯ ಬೇಡುವ ಧ್ಯೇಯದಿಂದ ಬಂದಿದ್ದೇವೆ. ಯಾವುದೇ ಪ್ರತಿಭಟನೆ ನಡೆಸುವ ಉದ್ದೇಶವಿಲ್ಲ.” ಎಂದು ಹೇಳಿದ್ದಾರೆ.
ಆದರೂ ಸ್ಥಳೀಯರು ಇವರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ, ಲೈವ್‌ನಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಆದರೆ ಶರಣಪ್ಪ ಕ್ಷಮೆ ಕೇಳಲು ನಿರಾಕರಿಸಿದ ಪರಿಣಾಮ, ಧರ್ಮಸ್ಥಳದ ಗೇಟ್ ಒಳಗೆ ಪ್ರವೇಶಕ್ಕೆ ಪೊಲೀಸರು ನಿರ್ಬಂಧ ಹಾಕಿದರು.