August 6, 2025
heart_issue

ಮಂಗಳೂರು: ಕಳೆದ ಆರು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 85 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ, ಈ ವರ್ಷದ ಜನವರಿಯಿಂದ ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 380 ಹೃದಯಾಘಾತ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ಈ ಪೈಕಿ 54 ಪುರುಷರು ಹಾಗೂ 31 ಮಹಿಳೆಯರು ಮೃತಪಟ್ಟಿದ್ದಾರೆ.

COVID-19 ಸಾಂಕ್ರಾಮಿಕದ ನಂತರ ಈಗ ದೇಶದಾದ್ಯಂತ ಸಾವು-ಬದುಕಿನ ಸಮಸ್ಯೆಯಾಗಿ ಹೊರಹೊಮ್ಮಿರುವ ಪ್ರಮುಖ ಆರೋಗ್ಯ ಸಮಸ್ಯೆ ಹೃದಯಾಘಾತವಾಗಿದೆ. ವಿಶೇಷವಾಗಿ, ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಇತ್ತೀಚಿನ ಸಮಯದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿದಿನ ಒಂದು ಕ್ಕಿಂತ ಹೆಚ್ಚು ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿದ್ದು, ಇದರಿಂದ ರಾಜ್ಯದ ಜನರಲ್ಲಿ ಕಳವಳ ಹೆಚ್ಚಿದೆ. ಇಡೀ ದೇಶದಾದ್ಯಂತ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಕಳೆದ ಕೆಲವು ವರ್ಷಗಳಲ್ಲಿ ಕಿರಿಯ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಉದಾಹರಣೆಗಳಿವೆ.

ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ:
ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುವುದು ಮತ್ತು ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸಲಹೆ ನೀಡಿದ್ದಾರೆ.

error: Content is protected !!