
ದೆಹಲಿ: ಸ್ನೇಹಿತನನ್ನು ಅಪಹರಿಸಿ ಕೊಲೆ ಮಾಡಿರುವ ದಾರುಣ ಘಟನೆ ನವದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ ನಡೆದಿದ್ದು, ಇದರಿಂದ ಎಲ್ಲೆಡೆ ಭೀತಿ ಮೂಡಿಸಿದೆ. ಸ್ನೇಹಿತರು ಪರಸ್ಪರ ಪ್ರೀತಿಯಿಂದ ಬೆಸೆದುಕೊಂಡಿರಬೇಕಾದರೆ, ಇಲ್ಲಿ ನಿರ್ಧಯವಾಗಿ ಪ್ರಾಣ ಹಿಂಸಿರುವುದರಿಂದ ನಿಜವಾದ ಸ್ನೇಹದ ಅರ್ಥವೇ ಪ್ರಶ್ನಾರ್ಹವಾಗಿದೆ.
9ನೇ ತರಗತಿಯ ವಿದ್ಯಾರ್ಥಿಯನ್ನು ಅಪಹರಿಸಿ, ಕುಟುಂಬದವರ ಬಳಿ ಫೋನ್ ಮೂಲಕ 10 ಲಕ್ಷ ರೂಪಾಯಿಗಳ ಬೇಡಿಕೆ ಇಡಲಾಗಿತ್ತು. ಆದರೆ ಈ ಘಟನೆ ಭಾರೀ ತಿರುವು ಪಡೆದು, ಕೊನೆಗೂ ಭಯಾನಕ ಅಂತ್ಯ ಕಂಡಿದೆ. ಬಾಲಕನನ್ನು ಭಲ್ಸ್ವಾ ಸರೋವರದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಕಿರುಕುಳ ನೀಡಿ ಹಲವಾರು ಬಾರಿ ಇರಿದು ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಅಲ್ಲಿಯೇ ತ್ಯಜಿಸಲಾಗಿದೆ.
ಮೃತ ದೇಹದ ಮೇಲೆ ಅನೇಕ ಇರಿತದ ಗಾಯಗಳು ಪತ್ತೆಯಾಗಿದ್ದು, ಇದು ಕ್ರೂರ ದಾಳಿಯ ಕುರಿತು ಸ್ಪಷ್ಟ ಸುಳಿವು ನೀಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡ ದೆಹಲಿ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು, ಅಪರಾಧದ ಹಿಂದಿನ ಉದ್ದೇಶ ಹಾಗೂ ಇನ್ನೂ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಹೆಚ್ಚಿನ ಪರಿಶೋಧನೆ ನಡೆಸುತ್ತಿದ್ದಾರೆ.