
ನವದೆಹಲಿ: ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿರುವ ಕುರಿತು, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ 25 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ.
ಯಶವಂತ್ ವರ್ಮಾ ಅವರ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ತಮ್ಮ ವರದಿಯಲ್ಲಿ ಅವರು ತಿಳಿಸಿದ್ದಾರೆ. ಈ ತನಿಖಾ ವರದಿ ಶನಿವಾರ ತಡರಾತ್ರಿ ಸುಪ್ರೀಂ ಕೋರ್ಟ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಆರೋಪಗಳ ಕುರಿತು ಯಶವಂತ್ ವರ್ಮಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ತನಿಖಾ ವರದಿಯಲ್ಲಿ ತಮ್ಮ ವಿರುದ್ಧ ನಡೆದಿರುವ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಹಾಗೂ ನಗದು ಪತ್ತೆಯಾದ ಕೊಠಡಿ ಅಸ್ವಾಭಾವಿಕ ಪರಿಸ್ಥಿತಿಯಲ್ಲಿತ್ತು ಮತ್ತು ಅದು ಅವರ ಕುಟುಂಬ ವಾಸಿಸುವ ಮುಖ್ಯ ಕಟ್ಟಡವಲ್ಲ, ಬದಲಾಗಿ ಔಟ್‌ಹೌಸ್ ಆಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಂನಲ್ಲಿ ಹಣ ಇಟ್ಟಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಪತ್ತೆಯಾದ ಹಣ ನಮ್ಮದಾಗಿದೆ ಎಂಬ ಆರೋಪವನ್ನು ನಾನು ಸಂಪೂರ್ಣವಾಗಿ ತಳ್ಳಿಹಾಕುತ್ತೇನೆ. ನಾವು ಈ ಹಣವನ್ನು ಸಂಗ್ರಹಿಸಿದ್ದೇವೆ ಎಂಬ ಊಹೆಯೇ ಅನರ್ಥಕವಾಗಿದೆ. ನನ್ನ ವಾಸಸ್ಥಳದಿಂದ ಆ ಔಟ್‌ಹೌಸ್ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ ಮತ್ತು ಆ ಪ್ರದೇಶಕ್ಕೆ ಮುಕ್ತ ಪ್ರವೇಶವಿದೆ. ಮಾಧ್ಯಮಗಳು ಹಾಗೂ ಪತ್ರಿಕೆಗಳು ದೋಷಾರೋಪಣೆ ಮಾಡುವ ಮುನ್ನ ಸೂಕ್ತ ತನಿಖೆ ನಡೆಸಬೇಕು” ಎಂದು ನ್ಯಾಯಮೂರ್ತಿ ವರ್ಮಾ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.