
ಕಳೆದ 13 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆಗೆ ಪೀಡಿತವಾದ ವಿದ್ಯಾರ್ಥಿನಿ ಸೌಜನ್ಯಳ ನ್ಯಾಯಕ್ಕಾಗಿ ಶಾಂತಿಯುತ ಧರಣಿ ಹಾಗೂ ಪ್ರತಿಭಟನೆ ನಡೆಸುವ ಹಕ್ಕು ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಮಾರ್ಚ್ 18ರಂದು ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು, ಆದರೆ ಶೇಷಾದ್ರಿಪುರಂ ಪೋಲಿಸ್ ನೋಟಿಸ್ ನೀಡಿ ಸಭೆ ನಿಲ್ಲಿಸಲು ಆದೇಶಿಸಿತ್ತು. ಈ ಕುರಿತು ಸಲ್ಲಿಸಲಾದ ರಿಟ್ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಾವೇ ಆದೇಶ ನೀಡಿದ್ದಾರೆ.
ಸಮಾಲೋಚನಾ ಸಭೆಯ ಸಂಚಾಲಕರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯಭಾಸ್ಕರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್ ಅರ್ಜಿ ಸಲ್ಲಿಸಿದ್ದರು.
“ಪೊಲೀಸರು ಮತ್ತು ಸರ್ಕಾರ ಸಭೆ ಹಾಗೂ ಪ್ರತಿಭಟನೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಕಾನೂನು ಉಲ್ಲಂಘನೆಯು ಸಂಭವಿಸಿದಲ್ಲಿ ಮಾತ್ರ ಪೋಲಿಸುಗಳು ಕ್ರಮ ಕೈಗೊಳ್ಳಬಹುದು. ಊಹೆಗಳ ಆಧಾರದ ಮೇಲೆ ಪ್ರತಿಭಟನೆ ತಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಹೇಳಿದರು.