
ಉಡುಪಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ದೃಶ್ಯಗಳಂತೆ ಅನುಭವವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೂ ಸಮುದಾಯದ ಮೇಲೆ ನಡೆದ ಹಿಂಸೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, “ಕಾಶ್ಮೀರದಂತೆಯೇ ಪಶ್ಚಿಮ ಬಂಗಾಳದಲ್ಲಿಯೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಘಟನೆಗಳು ದೇಶದ ಭದ್ರತೆ ಬಗ್ಗೆ ಆತಂಕ ಹುಟ್ಟಿಸುತ್ತವೆ. ಕೇಂದ್ರ ಸರ್ಕಾರ ತಕ್ಷಣ ಜಾಗರೂಕತೆಗೆ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಅವರು ಮುಂದಾಗಿ, “ಇಂತಹ ಘಟನೆಗಳು ಮರುಕಳಿಸಬಾರದು. ದೇಶದೊಳಗೆ ಸಮಗ್ರ ಭದ್ರತಾ ವ್ಯವಸ್ಥೆ ಅನುಷ್ಟಾನಗೊಳ್ಳಬೇಕಾಗಿದೆ,” ಎಂದು ಹೇಳಿದ್ದಾರೆ.
ಘಟನೆಗೆ ಆಳವಾದ ಕಳವಳ ವ್ಯಕ್ತಪಡಿಸಿದ ಪುತ್ತಿಗೆ ಶ್ರೀಗಳು
ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೂಡ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. “ಇದು ಕೇವಲ ಭಯೋತ್ಪಾದನೆ ಅಲ್ಲ, ಜಾಗತಿಕ ಮಟ್ಟದ ಷಡ್ಯಂತ್ರದ ಭಾಗವಿರಬಹುದು ಎಂಬ ಆತಂಕವಿದೆ,” ಎಂದು ಅವರು ಹೇಳಿದರು.
“ಸನಾತನ ಧರ್ಮದ ಅಸ್ತಿತ್ವಕ್ಕೆ ಬೆದರಿಕೆ ಎದುರಾಗುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಘಟನೆಗಳು ಪಿತೂರಿಯ ಭಾಗವಾಗಿರುವ ಸಾಧ್ಯತೆ ಇದೆ. ಸರ್ಕಾರ ಎಚ್ಚೆತ್ತು ಶಾಶ್ವತ ಪರಿಹಾರ ನೀಡಬೇಕು,” ಎಂದು ಶ್ರೀಗಳು ತಮ್ಮ ಆತಂಕ ವ್ಯಕ್ತಪಡಿಸಿದರು.