
ಮಂಗಳೂರು: ಬಜಪೆ ಕಿನ್ನಿಪದವಿಯಲ್ಲಿ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರು ಮೇ 2 ರಿಂದ ಮೇ 6 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡಲು ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಡೆಯಲು, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ ಸೆಕ್ಷನ್ 163ರಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಗುಪ್ತಚರ ಇಲಾಖೆ ನೀಡಿದ ವರದಿಯ ಮೇರೆಗೆ ಈ ನಿಷೇಧಾಜ್ಞೆ ಹೊರಡಿಸಲಾಗಿದೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಈ ಕೆಳಕಂಡ ನಿಬಂಧನೆಗಳು ಅನ್ವಯವಾಗುತ್ತವೆ:
- ಐದು ಅಥವಾ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವಂತಿಲ್ಲ.
- ಶಸ್ತ್ರಾಸ್ತ್ರಗಳು, ದೊಣ್ಣೆ, ಕತ್ತಿ, ಕೋಲು, ಬಂದೂಕು, ಚಾಕು ಮುಂತಾದವುಗಳನ್ನು ಒಯ್ಯುವಂತಿಲ್ಲ.
- ಪಟಾಕಿ ಸಿಡಿಸುವುದು, ಆಯಸಿಡ್ ಅಥವಾ ಸ್ಫೋಟಕಗಳನ್ನು ಒಯ್ಯುವುದು ನಿಷಿದ್ಧ.
- ವ್ಯಕ್ತಿಗಳ ಪ್ರತಿಕೃತಿ ಸುಡುವುದು, ಕಲ್ಲು ಅಥವಾ ಕ್ಷಿಪಣಿಯನ್ನು ಎಸೆಯುವ ಸಾಧನಗಳನ್ನು ಬಳಸುವುದು, ಶೇಖರಿಸುವುದು ಅಥವಾ ತಯಾರಿಸುವುದೂ ನಿರ್ಬಂಧಿತವಾಗಿದೆ.
- ಸರ್ಕಾರಿ ಸಂಸ್ಥೆಗಳ ವಿರುದ್ಧ ಅಥವಾ ಅಧಿಕಾರಿಗಳ ವಿರುದ್ಧ ನಿಂದನಾತ್ಮಕ ಘೋಷಣೆ ಕೂಗುವುದು, ಪ್ರಚೋದನಾತ್ಮಕ ಭಾಷಣ ಮಾಡುವುದು, ಅವಾಚ್ಯ ಶಬ್ದ ಬಳಸುವುದು, ಗಾಯನ ಹಾಗೂ ಪ್ರತಿಭಟನೆ ನಡೆಯುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇವುಗಳನ್ನು ಉಲ್ಲಂಘಿಸುವ ಯಾವುದೇ ಕೃತ್ಯಗಳು ಕಾನೂನು ಕ್ರಮಕ್ಕೆ ಒಳಪಡುವುದಾಗಿ ಕಮಿಷನರ್ ಸೂಚಿಸಿದ್ದಾರೆ.