
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಮಂಗಳವಾರ ಸಂಜೆ ಮಳೆ ಆಗಿದೆ. ಕಲ್ಮಡ್ಕದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಪುತ್ತೂರಿನಲ್ಲೂ ಉತ್ತಮ ಮಳೆಯಾದ್ದು ಕಾಣಿಸಿತು. ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.
ಮಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿಯಲ್ಲಿ ಬುಧವಾರವೂ ಅಲರ್ಟ್ ಘೋಷಣೆಯಾಗಿ, ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಉತ್ತಮ ಮಳೆಯಾಗಿದ್ದು, ಮುಂಡಾಜೆ ಹಾಗೂ ಚಾರ್ಮಾಡಿ ಸುತ್ತಮುತ್ತ ಹನಿ ಮಳೆಯಾಗಿದೆ. ಪುತ್ತೂರು ತಾಲೂಕಿನಲ್ಲಿ ಉತ್ತಮ ಮಳೆಯಾದರೆ, ಬಂಟ್ವಾಳ ತಾಲೂಕಿನ ವಿಟ್ಲ, ನೇರಳಕಟ್ಟೆ ಮತ್ತು ಅನಂತಾಡಿ ಭಾಗಗಳಲ್ಲಿ ಮಳೆಯಾಯಿತು.
ಸುಳ್ಯ ತಾಲೂಕಿನಲ್ಲಿ ಮಂಗಳವಾರ ಅಪರಾಹ್ನ ಗುಡುಗು ಸಹಿತ ಗಾಳಿ-ಮಳೆಯಾದರೆ, ಸಂಜೆ ಮತ್ತೆ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಯಿತು. ಸುಳ್ಯ ನಗರ, ಅರಂತೋಡು, ಸಂಪಾಜೆ, ಬೆಳ್ಳಾರೆ, ಐವರ್ನಾಡು, ನಿಂತಿಕಲ್ಲು, ಕಲ್ಮಡ್ಕ ಮತ್ತು ಜಾಲ್ಸೂರು ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ಮಾರ್ಚ್ 26ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಹಾಗೂ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ಕಡೆ ಲಘು ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನವಿರಲಿದೆ.