
ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ!
ಮೇ 1ರಿಂದ ದೇಶಾದ್ಯಂತ ಹೆದ್ದಾರಿಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಹೊಸ ವ್ಯವಸ್ಥೆಯು ಟೋಲ್ ಪ್ಲಾಜಾಗಳಲ್ಲಿ ವಾಹನ ನಿಲ್ಲಿಸಬೇಕಾದ ಅಗತ್ಯವಿಲ್ಲದಂತೆ ಮಾಡಲಿದೆ.
ಇದಕ್ಕೆ ಅನುಸಾರವಾಗಿ, ವಾಹನಗಳು ಟೋಲ್ ಪ್ಲಾಜಾ ಮೂಲಕ ನಿಲ್ಲದೇ ಸಾಗಿದರೂ ಸಾಕು – ವಾಹನದೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳ್ಳಲಿದೆ. ಇದು ಇಂಧನ ಮತ್ತು ಸಮಯ ಉಳಿಸುವುದರ ಜೊತೆಗೆ ವಾಹನಗಳ ನಿರಂತರ ಸಂಚಾರವನ್ನು ಕೂಡ ಸಾಧ್ಯವಾಗಿಸುತ್ತದೆ.
ಈ ಹೊಸ ವ್ಯವಸ್ಥೆಯು ಸ್ಯಾಟಲೈಟ್ ಆಧಾರಿತ ನ್ಯಾವಿಗೇಶನ್ ಸಿಸ್ಟಮ್ (GNSS) ಮೂಲಕ ಕಾರ್ಯನಿರ್ವಹಿಸುತ್ತದೆ. ವಾಹನ ಹೆದ್ದಾರಿಗೆ ಎಂಟರ್ ಆದಾಗಿನಿಂದ ಎಕ್ಸಿಟ್ ಆಗುವವರೆಗಿನ ದೂರದ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ.
ಟೋಲ್ ಸಂಗ್ರಹಕ್ಕಾಗಿ ಪ್ರತಿ ವಾಹನದಲ್ಲಿ ಆನ್‌ಬೋರ್ಡ್ ಯುನಿಟ್ (OBU) ಅಳವಡಿಸಲಾಗುವುದು. ಇದು ಜಿಪಿಎಸ್ ಮೂಲಕ ವಾಹನದ ಚಲನೆಯನ್ನ ನಿಖರವಾಗಿ ಟ್ರ್ಯಾಕ್ ಮಾಡಿ, ಎಷ್ಟು ದೂರ ಟೋಲ್ ರಸ್ತೆಯಲ್ಲಿ ಪ್ರಯಾಣವಾಗಿದೆ ಎಂಬುದನ್ನು ನಿರ್ಧರಿಸಿ, ಅದರ ಆಧಾರದ ಮೇಲೆ ಶುಲ್ಕ ಕಟ್ ಮಾಡುತ್ತದೆ.
ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ.