
ಶಿರ್ವ: ಚಿನ್ನದ ಅಂಗಡಿಗಳ ಮೇಲೆ ವಂಚನೆಯ ಹೊರೆ – ಮೂರು ಜುವೆಲ್ಲರ್ಸ್‌ವ್ಯಾಪಾರಸ್ಥರಿಗೆ ಲಕ್ಷಾಂತರ ರೂಪಾಯಿ ನಷ್ಟ
ಉಡುಪಿ ಜಿಲ್ಲೆಯ ಶಿರ್ವ ಸಮೀಪದ ನ್ಯೂ ಭಾರ್ಗವಿ ಜುವೆಲ್ಲರ್ಸ್‌ನಲ್ಲಿ ಮಹಿಳೆ ಮತ್ತು ಇಬ್ಬರು ಸಹಚರರು ಸೇರಿ ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ಹಣ ಪಾವತಿಸದೇ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶಿರ್ವದ ಜುವೆಲ್ಲರ್ಸ್ ಮಾಲೀಕ ಗಣೇಶ್ (52) ಅವರು ನೀಡಿದ ದೂರಿನಂತೆ, ಆರೋಪಿ ಫರೀದಾ ಎಂಬ ಮಹಿಳೆ 2025ರ ಮಾರ್ಚ್ 8 ರಿಂದ 11ರ ನಡುವೆ ಅವರು ನಿರ್ವಹಿಸುತ್ತಿರುವ “ನ್ಯೂ ಭಾರ್ಗವಿ ಜುವೆಲ್ಲರ್ಸ್” ಅಂಗಡಿಯಿಂದ ಫೋನ್ ಮೂಲಕ ಸಂಪರ್ಕಿಸಿ ನಂಬಿಕೆ ಮೂಡಿಸಿದರು. ಆಕೆಯ ಸಹಚರರಾದ ಅಪ್ಸಲ್ ಮತ್ತು ಇತರ ಇಬ್ಬರ ಮೂಲಕ ಸುಮಾರು ₹1,78,000 ಮೌಲ್ಯದ 69.165 ಗ್ರಾಂ ಚಿನ್ನಾಭರಣಗಳನ್ನು ಖರೀದಿಸಿ, ಹಣ ಪಾವತಿಸುವುದಾಗಿ ತಿಳಿಸಿದರು. ಆದರೆ ಈವರೆಗೆ ಬಿಲ್ಲು ಮೊತ್ತ ಪಾವತಿಸದೆ ವಂಚನೆ ಎಸಗಿದ್ದಾರೆ.
ಇದೇ ರೀತಿ, ಫರೀದಾ 2025ರ ಮಾರ್ಚ್ 16 ರಂದು ಶಿರ್ವದ “ಕೃಪಾ ಜುವೆಲ್ಲರ್ಸ್” ಮಾಲೀಕರಾದ ಅನುಷ್ ರವರಿಂದ ಸಹ 10.740 ಗ್ರಾಂ ತೂಕದ ಚಿನ್ನಾಭರಣಗಳನ್ನು ಖರೀದಿ ಮಾಡಿ, ಹಣ ಪಾವತಿಸದೆ ಮಂಗಳೂರಿನಲ್ಲಿ ಅಪ್ಸಲ್ ಮುಖಾಂತರ ವಸ್ತುಗಳನ್ನು ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 2025ರ ಏಪ್ರಿಲ್ 9ರಂದು ಫರೀದಾ ಪುಷ್ಪಾ ಜುವೆಲ್ಲರ್ಸ್ ಮಾಲೀಕರಾದ ಶ್ರೀಹರ್ಷ ಅವರನ್ನು ಸಹ ಇದೇ ರೀತಿಯಲ್ಲಿ ವಂಚಿಸಿ, 18.660 ಗ್ರಾಂ ತೂಕದ ಚಿನ್ನಾಭರಣಗಳನ್ನು ಬಿಲ್ಲು ಹಣ ಪಾವತಿಸದೇ ತೆಗೆದುಕೊಂಡಿದ್ದಾಳೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಸಂಖ್ಯೆ 46/2025ರಡಿ ಭಾರತೀಯ ದಂಡ ಸಂಹಿತೆಯ ಕಲಂ 318(4) ಮತ್ತು 3(5) BNS ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.